ಕೋಡಿಹಳ್ಳಿ ಚಂದ್ರಶೇಖರ್
ಬಳ್ಳಾರಿ: ‘ಹಿಂದಿ ಹೇರಿಕೆ ವಿರುದ್ಧ ದಕ್ಷಿಣದ ರಾಜ್ಯಗಳನ್ನು ಒಗ್ಗೂಡಿಸುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರೆ, ಪಕ್ಷದ ಹೈಕಮಾಂಡ್‌ನ ಗಮನಕ್ಕೆ ತಂದು ನಿರ್ಧರಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮರ್ ಹೇಳುತ್ತಾರೆ. ಪ್ರತಿಯೊದಕ್ಕೂ ಹೈಕಮಾಂಡ್‌ನ ಅನುಮತಿ ಕೇಳಬೇಕೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ನವ ಕರ್ನಾಟಕ ನಿರ್ಮಾಣ ಆಂದೋಲನದ ‘ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ’ಯಲ್ಲಿ ಮಾತನಾಡಿದ ಅವರು, ‘ಪಕ್ಷದ ಹೈಕಮಾಂಡ್ ಎಂದರೆ ಯಾರು? ನವದೆಹಲಿಯ ರಾಜಕಾರಣಿಗಳೇ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ಗಳು. ಹಿಂದಿ ಹೇರಿಕೆಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಂದ ಏನು ಪರಿಹಾರ ನಿರೀಕ್ಷಿಸಲು ಸಾಧ್ಯ? ಅವರಿಂದ ಏನು ಉತ್ತರ ಸಿಗಬಹುದು’ ಎಂದು ಪ್ರಶ್ನಿಸಿದರು.
‘ರಾಜ್ಯಕ್ಕೆ ಪರ್ಯಾಯ ರಾಜಕಾರಣ ಬೇಕೆ ಹೊರತು ವೃತ್ತಿ ರಾಜಕಾರಣ ಅಲ್ಲ. ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಂದ ಪರಿವರ್ತನಾ ರಾಜಕಾರಣ ಸಾಧ್ಯವೇ? ಇಷ್ಟು ದಿನ ಅವರು ಮಾಡಿದ ಕೆಲಸಗಳು ಜನರನ್ನು ಸಮಸ್ಯೆಯಿಂದ ಹೊರತಂದಿಲ್ಲ. ಜನರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ’ ಎಂದರು.
‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಅನಿವಾರ್ಯ, ಬಿಜೆಪಿಗೆ ಕಾಂಗ್ರೆಸ್ ಅಗತ್ಯ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿ ಮೂರನೇ ಶಕ್ತಿ ಉದಯಿಸದಂತೆ ತಡೆದಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.