ADVERTISEMENT

ಕೊರೊನಾ ಭೀತಿಯಲ್ಲೂ ರಂಗಿನಾಟದಲ್ಲಿ ಮಿಂದೆದ್ದ ಜನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 10:04 IST
Last Updated 10 ಮಾರ್ಚ್ 2020, 10:04 IST
ಬಣ್ಣದಾಟದಲ್ಲಿ ತೊಡಗಿದ ಜನ
ಬಣ್ಣದಾಟದಲ್ಲಿ ತೊಡಗಿದ ಜನ   

ಹೊಸಪೇಟೆ: ಅಲ್ಲಿದ್ದವರ ಯಾರ ಮುಖವೂ ಗುರುತು ಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರ ಮುಖ, ದೇಹವೆಲ್ಲ ವಿವಿಧ ಬಣ್ಣಗಳು ಆವರಿಸಿಕೊಂಡಿದ್ದವು. ಅಲ್ಲಿ ಕಿರಿಯರು, ಹಿರಿಯರು ಎಂಬ ಭೇದ ಕಂಡು ಬರಲಿಲ್ಲ. ಗಂಡು–ಹೆಣ್ಣೆಂಬ ವ್ಯತ್ಯಾಸವಿರಲಿಲ್ಲ. ಅಲ್ಲಿದ್ದದ್ದು ಬರೀ ಸಂಭ್ರಮ.. ಕೇಳಿಸಿದ್ದು ‘ಹೋಳಿ ಹೈ’ ಎಂಬ ಉದ್ಘೋಷ.

ಹೋಳಿ ಹಬ್ಬದ ಪ್ರಯುಕ್ತ ಮಂಗಳವಾರ ನಗರದ ವಿವಿಧ ಬಡಾವಣೆಗಳಲ್ಲಿ ಕಂಡು ಬಂದ ದೃಶ್ಯಗಳಿವು.

ಬೆಳಿಗ್ಗೆಯಿಂದಲೇ ನಗರದ ಬಹುತೇಕ ಬಡಾವಣೆಗಳಲ್ಲಿ ಹೋಳಿ ಸಂಭ್ರಮ ಕಂಡು ಬಂತು. ಚಿಣ್ಣರು ಪರಸ್ಪರ ಗುಲಾಲ್‌ ಎರಚಿಕೊಂಡು ಬಣ್ಣದಲ್ಲಿ ಮಿಂದೆದ್ದರು. ಯುವಕ/ಯುವತಿಯರು, ವಯಸ್ಕ ಗಂಡು ಮತ್ತು ಹೆಣ್ಣು ಮಕ್ಕಳು ಅದಕ್ಕೆ ಹೊರತಾಗಿರಲಿಲ್ಲ.

ADVERTISEMENT

ಮನೆ ಮುಂದಿನ ಕಟ್ಟೆಯ ಮೇಲೆ ಬಕೆಟ್‌ಗಳಲ್ಲಿ ಬಣ್ಣ ತುಂಬಿಟ್ಟುಕೊಂಡು ನಿಂತಿದ್ದ ಚಿಣ್ಣರು, ದಾರಿ ಹೋಕರ ಮೇಲೆ ಬಣ್ಣ ಎರಚಿ ಖುಷಿ ಪಟ್ಟರು. ಚಿಣ್ಣರ ಸೇನೆಯಿಂದ ತಪ್ಪಿಸಿಕೊಳ್ಳಲು ಕೆಲವರು ಅವರ ಮಾರ್ಗವನ್ನೇ ಬದಲಿಸಿಕೊಂಡು ದೈನಂದಿನ ಕೆಲಸಗಳಿಗೆ ಹೋದರು. ಯುವಕರ ದಂಡು ಬೈಕ್‌ಗಳಲ್ಲಿ ಸುತ್ತಾಡಿ ಸ್ನೇಹಿತರೊಂದಿಗೆ ಬಣ್ಣದಾಟವಾಡಿದರು. ಎಲ್ಲೆಡೆ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ಶಬ್ದ ಕಿವಿಗೆ ಅಪ್ಪಳಿಸುತ್ತಿತ್ತು. ಸಂಚಾರ ಪೊಲೀಸರು ಅಸಹಾಯಕರಾಗಿದ್ದರು.

ಯುವಕರ ಬಣ್ಣದಾಟದ ವೇಳೆ ಪರಸ್ಪರ ಕೋಳಿ ಮೊಟ್ಟೆ, ಟೊಮ್ಯಾಟೊಗಳನ್ನು ತಲೆ ಮೇಲೆ ಹೊಡೆದುಕೊಂಡರು. ಮೈಮೇಲಿನ ಬಟ್ಟೆಗಳನ್ನು ಹರಿದುಕೊಂಡು ವಿದ್ಯುತ್‌ ತಂತಿ ಮೇಲೆ ಎಸೆದು, ಕಿರುಚಾಡಿ ಸಂಭ್ರಮಿಸಿದರು. ಕೆಲವರು ತಮಟೆ ಬಾರಿಸುತ್ತ, ಬಣ್ಣ ಎರಚುತ್ತ ನಗರ ಪ್ರದಕ್ಷಿಣೆ ಹಾಕಿದರು.

ನಡೆಯದ ಸಾಮೂಹಿಕ ಬಣ್ಣದಾಟ

ಪ್ರತಿವರ್ಷ ನಗರದ ತಾಲ್ಲೂಕು ಕ್ರೀಡಾಂಗಣ, ಸಾಯಿಬಾಬಾ ದೇವಸ್ಥಾನದ ಬಳಿ ಸಾಮೂಹಿಕ ಬಣ್ಣದಾಟಕ್ಕೆ ರಾಜಕಾರಣಿಗಳು ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಈ ಸಲ ಅದು ಕಂಡು ಬರಲಿಲ್ಲ.

ಅನೇಕ ವರ್ಷಗಳಿಂದ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ತಾಲ್ಲೂಕು ಕ್ರೀಡಾಂಗಣದಲ್ಲಿ ರಂಗಿನಾಟ ಆಯೋಜನೆ ಮಾಡುತ್ತಿದ್ದರು. ವಡಕರಾಯ ದೇವಸ್ಥಾನದಿಂದ ತಾಲ್ಲೂಕು ಕ್ರೀಡಾಂಗಣದ ವರೆಗೆ ಮೆರವಣಿಗೆಯಲ್ಲಿ ಬರುತ್ತಿದ್ದರು. ಆದರೆ, ಈ ವರ್ಷ ಆ ದೃಶ್ಯ ಕಂಡು ಬರಲಿಲ್ಲ. ಸ್ವತಃ ಅವರು ದೂರ ಉಳಿದರು.

ಬಿಜೆಪಿ ಮುಖಂಡ ಎಚ್‌.ಆರ್‌. ಗವಿಯಪ್ಪನವರು ಸಾಯಿಬಾಬಾ ದೇವಸ್ಥಾನದ ಬಳಿ ಸಾಮೂಹಿಕ ಹಬ್ಬ ಆಚರಿಸಲು ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಅವರು ಕೂಡ ಈ ಸಲ ವ್ಯವಸ್ಥೆ ಮಾಡಲಿಲ್ಲ. ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್‌–19 ಸೋಂಕಿನ ಭೀತಿಯಿಂದ ಕಾರ್ಯಕ್ರಮ ಆಯೋಜಿಸಲಿಲ್ಲ ಎಂದು ತಿಳಿದು ಬಂದಿದೆ.

ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕೆಲವರು ಮನೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸಲಿಲ್ಲ. ಹೀಗಾಗಿ ಚಿಣ್ಣರು ಬಣ್ಣದಾಟದಿಂದ ವಂಚಿತರಾದರು.

ಕಾಮದಹನ

ನಗರದ ವಿವಿಧ ಬಡಾವಣೆಗಳಲ್ಲಿ ಸೋಮವಾರ ತಡರಾತ್ರಿ ಕಾಮ ದಹನ ಮಾಡಲಾಯಿತು. ಕಟ್ಟಿಗೆ, ಕುಳ್ಳು ಜೋಡಿಸಿ ದಹಿಸಿದರು. ಜನ ನಿದ್ದೆಗೆಟ್ಟು ಆ ಸಂದರ್ಭಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.