ADVERTISEMENT

ಹೂವಿನಹಡಗಲಿ: ವಂತಿಗೆಯಿಂದ ರಸ್ತೆ ದುರಸ್ತಿಪಡಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 2:18 IST
Last Updated 18 ಫೆಬ್ರುವರಿ 2026, 2:18 IST
ಹೂವಿನಹಡಗಲಿ ತಾಲ್ಲೂಕು ಶಿವಲಿಂಗನಹಳ್ಳಿ ರಸ್ತೆಯನ್ನು ಗ್ರಾಮಸ್ಥರು ದುರಸ್ತಿಪಡಿಸಿದರು
ಹೂವಿನಹಡಗಲಿ ತಾಲ್ಲೂಕು ಶಿವಲಿಂಗನಹಳ್ಳಿ ರಸ್ತೆಯನ್ನು ಗ್ರಾಮಸ್ಥರು ದುರಸ್ತಿಪಡಿಸಿದರು   

ಹೂವಿನಹಡಗಲಿ: ತಾಲ್ಲೂಕಿನ ಶಿವಲಿಂಗನಹಳ್ಳಿ ಗ್ರಾಮಸ್ಥರು ವಂತಿಗೆ ಹಾಕಿ ರಸ್ತೆ ದುರಸ್ತಿಪಡಿಸಿಕೊಳ್ಳುವ ಮೂಲಕ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸಿದ್ದಾರೆ.

ಮಿರಾಕೊರನಹಳ್ಳಿಯಿಂದ ಶಿವಲಿಂಗನಹಳ್ಳಿ ಗ್ರಾಮದವರೆಗಿನ ರಸ್ತೆ ಹಾಳಾಗಿ ನಾಲ್ಕೈದು ವರ್ಷ ಕಳೆದಿದ್ದರೂ ಕನಿಷ್ಠ ದುರಸ್ತಿ ಕೆಲಸ ಮಾಡಿರಲಿಲ್ಲ. ರಸ್ತೆಯಲ್ಲಿ ಗುಂಡಿಗಳು ಬಿದ್ದು, ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಕಷ್ಟವಾಗಿತ್ತು. ಕೆಲ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದರು.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಗ್ರಾಮಸ್ಥರು ರಸ್ತೆ ದುರಸ್ತಿ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಜೆಸಿಬಿ, ಟ್ರ್ಯಾಕ್ಟರ್ ಬಾಡಿಗೆಗಾಗಿ ₹20 ಸಾವಿರ ವಂತಿಗೆ ಸಂಗ್ರಹಿಸಿ, ಸ್ವತಃ ಶ್ರಮದಾನದ ಮೂಲಕ ರಸ್ತೆಯ ಗುಂಡಿಗಳನ್ನು ಮುಚ್ಚಿದ್ದಾರೆ.

ADVERTISEMENT

ಗ್ರಾಮದ ಯುವಕರಾದ ಬಿ.ಮಲ್ಲಿಕಾರ್ಜುನ ಗೌಡ, ಸಂಘರ್ಷ, ಪ್ರವೀಣ, ಗುಡಿ ಪ್ರವೀಣ, ಆರ್. ದ್ಯಾಮಜ್ಜ, ಎ.ನಾಗರಾಜ ಇತರರು ರಸ್ತೆ ದುರಸ್ತಿಯ ನೇತೃತ್ವ ವಹಿಸಿದ್ದರು.

‘ನಮ್ಮೂರ ರಸ್ತೆ ಹಾಳಾಗಿ ನಾಲ್ಕೈದು ವರ್ಷವಾಗಿದ್ದರೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯವರು ದುರಸ್ತಿಪಡಿಸಿರಲಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾರೂ ಸ್ಪಂದಿಸಿರಲಿಲ್ಲ. ಹಾಗಾಗಿ ಯುವಕರೆಲ್ಲ ಸೇರಿ ರಸ್ತೆ ದುರಸ್ತಿಗೆ ಯೋಜನೆ ರೂಪಿಸಿದೆವು. ಗ್ರಾಮದ ಜನರು ಕೈ ಜೋಡಿಸಿದ್ದರಿಂದ ರಸ್ತೆಯ ಗುಂಡಿಗಳು ಸಮತಟ್ಟಾಗಿವೆ’ ಎಂದು ಗ್ರಾಮದ ಯುವಕ ವಿರೂಪಾಕ್ಷಯ್ಯ ಹೇಳಿದರು.

ಹೂವಿನಹಡಗಲಿ ತಾಲ್ಲೂಕು ಶಿವಲಿಂಗನಹಳ್ಳಿ ರಸ್ತೆಯನ್ನು ಗ್ರಾಮಸ್ಥರು ದುರಸ್ತಿಪಡಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.