
ಹೂವಿನಹಡಗಲಿ: ನಿರ್ವಹಣೆ ಕೊರತೆಯಿಂದ ಪಟ್ಟಣದ ಪ್ರವಾಸಿ ಮಂದಿರ (ಐಬಿ) ತೀರಾ ಹದಗೆಟ್ಟಿದೆ. ಬೇರೆಡೆಯಿಂದ ಬರುವ ಅತಿಥಿಗಳು ಐಬಿಯ ಒಳ, ಹೊರಗಿನ ಪರಿಸರ ಕಂಡು ಮೂಗು ಮುರಿಯುವಂತಾಗಿದೆ.
ಸೋರುವ ಕೊಠಡಿಗಳು, ಬಣ್ಣ ಮಾಸಿದ ಗೋಡೆಗಳು, ಮುಟ್ಟಲೂ ಅಸಹ್ಯವೆನಿಸುವಷ್ಟು ಹಾಳಾಗಿರುವ ಸೋಫಾ, ಮಂಚಗಳು, ವಾಕರಿಕೆ ತರಿಸುವ ಹಾಸಿಗೆ ಹೊದಿಕೆ, ಅವ್ಯವಸ್ಥೆಯ ಕ್ಯಾಂಟೀನ್, ಹಗಲಿನಲ್ಲೂ ರಕ್ತ ಹೀರುವ ಸೊಳ್ಳೆಗಳು… ಹೀಗೆ ಮಲ್ಲಿಗೆ ನಗರಿಯ ಮರ್ಯಾದೆ ಕಳೆಯುವ ಮಟ್ಟಿಗೆ ‘ಐಬಿ’ ದುಸ್ಥಿತಿಗೆ ತಲುಪಿದೆ.
ವಿಶೇಷ ಅತಿಥಿಗಳಿಗೆ ಮೀಸಲಿರುವ ಹೊಸ ಕಟ್ಟಡ ಹೊರತುಪಡಿಸಿ ಹಳೆಯ ಮೂರು ಕಟ್ಟಡದಲ್ಲಿರುವ ಕೊಠಡಿಗಳೆಲ್ಲ ಅವ್ಯವಸ್ಥೆಯಿಂದ ಕೂಡಿವೆ. ‘ತುಂಗಾ’ ‘ಭದ್ರಾ’ ‘ಮಲ್ಲಿಗೆ’ ‘ಸಂಪಿಗೆ’ ಚೆಂದದ ಹೆಸರಿನ ಕೊಠಡಿಗಳು ಹೆಸರಿಗೆ ತಕ್ಕಂತೆ ಚೆಂದವಾಗಿ ಉಳಿದಿಲ್ಲ. ಏರ್ ಕೂಲರ್, ಫ್ಯಾನ್, ಗೀಸರ್, ಯುಪಿಎಸ್ ಕೆಟ್ಟು ಹಲವು ತಿಂಗಳಾದರೂ ದುರಸ್ತಿ ಮಾಡಿಸಿಲ್ಲ. ಸುಣ್ಣ, ಬಣ್ಣ ಕಾಣದೇ ಕೊಠಡಿಗಳು ಅಂದಗೆಟ್ಟಿವೆ. ಸಾಮಾನ್ಯ ನಾಲ್ಕು ಕೊಠಡಿಗಳ ಸ್ಥಿತಿ ಹೇಳತೀರದಾಗಿದೆ. ಕೆಲಸ ನಿಮಿತ್ತ ಇಲ್ಲಿ ಬಂದು ಉಳಿಯುವವರಿಗೆ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ನಿರ್ವಹಣೆಯನ್ನೇ ಮರೆತಂತಿದೆ.
ಐಬಿಯಲ್ಲಿ ಮೂವರು ಮೇಟಿಗಳು, ಇಬ್ಬರು ಸ್ವಚ್ಛತಾಗಾರರು ಕೆಲಸ ಮಾಡುತ್ತಾರೆ. ಇವರಿಗೆ ಐದಾರು ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದು, ಮಾಸಿಕ ಎಷ್ಟು ವೇತನ ನಿಗದಿಯಾಗಿದೆ ಎಂದು ಗೊತ್ತೇ ಇಲ್ಲ. ಏಜೆನ್ಸಿಯವರು ಕೊಟ್ಟಷ್ಟು, ಇವರು ಪಡೆದಷ್ಟು ಎನ್ನುವಂತಾಗಿದೆ. ‘ಪ್ರಶ್ನೆ ಮಾಡಿದರೆ ಕೆಲಸಕ್ಕೆ ಬರಬೇಡಿ ಎನ್ನುತ್ತಾರೆ. ಸರಿಯಾಗಿ ವೇತನ ಬಾರದೇ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ಮೇಟಿಯೊಬ್ಬರು ಅಳಲು ತೋಡಿಕೊಂಡರು.
ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಹೊರಗುತ್ತಿಗೆ ನಿಯಮದಂತೆ ವೇತನ ಸೌಲಭ್ಯ ನೀಡದೇ ಶೋಷಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರವಾಸಿ ಮಂದಿರಕ್ಕೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಿ, ಸೂಕ್ತ ನಿರ್ವಹಣೆಗೆ ಅಧಿಕಾರಿಗಳು ಗಮನಹರಿಸಬೇಕು. ಐಬಿ ಆವರಣದಲ್ಲಿ ನೈರ್ಮಲ್ಯ ಕಾಪಾಡಿ, ಸುಂದರ ವಾತಾವರಣ ರೂಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅನುದಾನ ಕೊರತೆಯಿಂದ ಐಬಿ ನಿರ್ವಹಣೆಯಲ್ಲಿ ಸಮಸ್ಯೆಯಾಗಿರುವುದು ನಿಜ. ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದು ಬಿಡುಗಡೆಯಾದ ತಕ್ಷಣ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುತ್ತೇವೆರಾಜಪ್ಪ ಎಇಇ ಪಿಡಬ್ಲ್ಯೂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.