ADVERTISEMENT

ಹೊಸಪೇಟೆ ತಾಲ್ಲೂಕಿನ 14 ಪಂಚಾಯಿತಿ ಮೀಸಲು ನಿಗದಿ: 7 ಕಡೆ ಮಹಿಳೆಗೆ ಅಧ್ಯಕ್ಷ ಗಾದಿ

ಹೊಸಪೇಟೆ ತಾಲ್ಲೂಕಿನ 14 ಪಂಚಾಯಿತಿ ಮೀಸಲು ನಿಗದಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 13:11 IST
Last Updated 23 ಜನವರಿ 2021, 13:11 IST
ಹೊಸಪೇಟೆಯ ಮೀರ್‌ ಆಲಂ ಟಾಕೀಸ್‌ನಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯಿತಿಗಳ ಮೀಸಲು ನಿಗದಿ ಸಭೆಯಲ್ಲಿ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು
ಹೊಸಪೇಟೆಯ ಮೀರ್‌ ಆಲಂ ಟಾಕೀಸ್‌ನಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯಿತಿಗಳ ಮೀಸಲು ನಿಗದಿ ಸಭೆಯಲ್ಲಿ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು   

ಹೊಸಪೇಟೆ: ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಅಧ್ಯಕ್ಷತೆಯಲ್ಲಿ ಶನಿವಾರ ನಗರದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ವ್ಯಾಪ್ತಿಯ 14 ಗ್ರಾಮ ಪಂಚಾಯಿತಿಗಳ ಮೀಸಲು ನಿಗದಿ ಮಾಡಲಾಯಿತು.

ಈ ಪೈಕಿ ಏಳು ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮಹಿಳೆಯರು ಅಲಂಕರಿಸಿರುವುದು ಖಚಿತವಾಯಿತು.

ಡಣಾಪುರ, ಪಾಪಿನಾಯಕನಹಳ್ಳಿ, ಕಲ್ಲಹಳ್ಳಿ, ಬುಕ್ಕಸಾಗರ ಹಾಗೂ ನಾಗಲಾಪುರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮೀಸಲು ಬಂದದ್ದರಿಂದ ಲಾಟರಿ ಮೂಲಕ ಮೀಸಲಾತಿ ನಿಗದಿಪಡಿಸಲಾಯಿತು. ಅದರಲ್ಲಿ ಡಣಾಪುರ ಹಾಗೂ ಬುಕ್ಕಸಾಗರ ಪಂಚಾಯಿತಿ ಸಾಮಾನ್ಯ ಮಹಿಳೆಗೆ ಮೀಸಲಾದವು.

ADVERTISEMENT

ಇದೇ ರೀತಿ ಪಾಪಿನಾಯಕನಹಳ್ಳಿ, ಡಣಾಪುರ, ಜಿ. ನಾಗಲಾಪುರ, ಬುಕ್ಕಸಾಗರ ಮತ್ತು ಕಲ್ಲಹಳ್ಳಿ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಲಾಟರಿ ಮೂಲಕ ನಡೆಸಿದ ಮೀಸಲು ನಿಗದಿ ಪ್ರಕ್ರಿಯೆಯಲ್ಲಿ ಪಾಪಿನಾಯಕನಹಳ್ಳಿ, ಜಿ. ನಾಗಲಾಪುರ ಮತ್ತು ಕಲ್ಲಹಳ್ಳಿ ಪಂಚಾಯಿತಿಗಳು ಪರಿಶಿಷ್ಟ ಜಾತಿ ಮಹಿಳೆಗೆ ಒಲಿದವು.

ಇನ್ನು ಹೊಸೂರು ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಸಾಫ್ಟ್‌ವೇರ್‌ ಮೂಲಕ ನೇರವಾಗಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದರೆ, ಬಳಿಕ ನಡೆದ ಲಾಟರಿ ಎತ್ತುವ ಪ್ರಕ್ರಿಯೆಯಲ್ಲಿ ಹಂಪಿ ಉಪಾಧ್ಯಕ್ಷ ಸ್ಥಾನ ಅದೇ ವರ್ಗಕ್ಕೆ ಹೋಯಿತು. ಮಲಪನಗುಡಿ ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಒಲಿಯಿತು.
ಡಣಾಯಕನಕೆರೆ ಮತ್ತು ನಾಗೇನಹಳ್ಳಿ ಪೈಕಿ ಒಂದನ್ನು ಸಾಮಾನ್ಯ ಮಹಿಳೆಗೆ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದಾಗ ಲಾಟರಿ ಮೂಲಕ ನಿಗದಿ ಮಾಡಲಾಯಿತು. ಇದರಲ್ಲಿ ನಾಗೇನಹಳ್ಳಿ ಸಾಮಾನ್ಯ ಮಹಿಳೆಗೆ ಮೀಸಲು ಬಂತು.

‘ನಾಲ್ಕು ಅವಧಿಯಿಂದ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗುತ್ತಿದೆ. ಹೀಗಾದರೆ ಸಾಮಾನ್ಯ ವರ್ಗದವರು ಏನು ಮಾಡಬೇಕು? ಅದನ್ನು ಬದಲಿಸಬೇಕು’ ಎಂದು ಪಂಚಾಯಿತಿ ಸದಸ್ಯ ಸೈಫುಲ್ಲಾ ಆಗ್ರಹಿಸಿದರು.

ಅದಕ್ಕೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಪ್ರತಿಕ್ರಿಯಿಸಿ, ‘ಎಲ್ಲವೂ ಸಾಫ್ಟ್‌ವೇರ್‌ ಮೂಲಕ ನಿರ್ಧಾರವಾಗುತ್ತದೆ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್‌ ಇದ್ದರು.

ಗ್ರಾಮ ಪಂಚಾಯಿತಿ -ಅಧ್ಯಕ್ಷ/ಉಪಾಧ್ಯಕ್ಷ

ಪಾಪಿನಾಯಕನಹಳ್ಳಿ - ಸಾಮಾನ್ಯ /ಪರಿಶಿಷ್ಟ ಜಾತಿ ಮಹಿಳೆ
ಜಿ. ನಾಗಲಾಪುರ-ಸಾಮಾನ್ಯ/ಪರಿಶಿಷ್ಟ ಜಾತಿ ಮಹಿಳೆ
ಕಲ್ಲಹಳ್ಳಿ-ಸಾಮಾನ್ಯ /ಪರಿಶಿಷ್ಟ ಜಾತಿ ಮಹಿಳೆ
114–ಡಣಾಪುರ-ಸಾಮಾನ್ಯ/ಮಹಿಳೆ ಪರಿಶಿಷ್ಟ ಜಾತಿ
ಬುಕ್ಕಸಾಗರ-ಸಾಮಾನ್ಯ/ಮಹಿಳೆ ಪರಿಶಿಷ್ಟ ಜಾತಿ
ಮಲಪನಗುಡಿ-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ
ಹೊಸೂರು-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮಹಿಳೆ
ನಾಗೇನಹಳ್ಳಿ-ಪರಿಶಿಷ್ಟ ಜಾತಿ/ಮಹಿಳೆ ಸಾಮಾನ್ಯ ಮಹಿಳೆ
ಗಾದಿಗನೂರು-ಪರಿಶಿಷ್ಟ ಜಾತಿ/ಮಹಿಳೆ ಸಾಮಾನ್ಯ ಮಹಿಳೆ
ಚಿಲಕನಹಟ್ಟಿ-ಪರಿಶಿಷ್ಟ ಜಾತಿ/ಮಹಿಳೆ ಸಾಮಾನ್ಯ
ಹಂಪಿ-ಪರಿಶಿಷ್ಟ ಪಂಗಡ/ಪರಿಶಿಷ್ಟ ಪಂಗಡ ಮಹಿಳೆ
ಸೀತಾರಾಮ ತಾಂಡಾ-ಪರಿಶಿಷ್ಟ ಪಂಗಡ/ಸಾಮಾನ್ಯ
ಡಣಾಯಕನಕೆರೆ-ಪರಿಶಿಷ್ಟ ಪಂಗಡ/ಮಹಿಳೆ ಸಾಮಾನ್ಯ
ಬೈಲುವದ್ದಿಗೇರಿ-ಪರಿಶಿಷ್ಟ ಪಂಗಡ ಮಹಿಳೆ/ಪರಿಶಿಷ್ಟ ಪಂಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.