ADVERTISEMENT

ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 8:09 IST
Last Updated 21 ಸೆಪ್ಟೆಂಬರ್ 2020, 8:09 IST
ಪ್ರತಿಭಟನಾಕಾರರು
ಪ್ರತಿಭಟನಾಕಾರರು   

ಹೊಸಪೇಟೆ: ಹೊಸಪೇಟೆ ನಗರವನ್ನು ಕೇಂದ್ರ ಮಾಡಿ ನೂತನ ವಿಜಯನಗರ ಜಿಲ್ಲೆ ರಚಿಸಬೇಕೆಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಕಾರ್ಯಕರ್ತರು ಸೋಮವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

‘11 ತಾಲ್ಲೂಕುಗಳನ್ನು ಒಳಗೊಂಡಿರುವ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ಬಹಳ ವಿಸ್ತಾರವಾಗಿದೆ. ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕಿನ ಕೊನೆ ಭಾಗದ ಹಳ್ಳಿಗಳಿಗೆ 200 ಕಿ.ಮೀಗೂ ಅಧಿಕ ದೂರವಾಗುತ್ತದೆ. ಜನರ ದೈನಂದಿನ ಕಚೇರಿ ಕೆಲಸ, ಆಡಳಿತದ ಹಿತದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜಿಸುವುದು ಉತ್ತಮ. ಈ ನಿಟ್ಟಿನಲ್ಲಿ ಸರ್ಕಾರ ಅಧಿವೇಶನ ಮುಗಿಯುವುದರೊಳಗೆ ತೀರ್ಮಾನಕ್ಕೆ ಬರಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಹೊಸಪೇಟೆ, ಕಂಪ್ಲಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲ್ಲೂಕುಗಳನ್ನು ಒಳಗೊಂಡ ವಿಜಯನಗರ ಜಿಲ್ಲೆಯ ಬೇಡಿಕೆ ದಶಕದಿಂದ ಇದೆ. ಆದರೆ, ಕಾರಣಾಂತರಗಳಿಂದ ಈ ಬೇಡಿಕೆ ಈಡೇರಿಲ್ಲ. ಈಗ ಅದಕ್ಕೆ ಹೆಚ್ಚಿನ ಬಲ ಬಂದಿದೆ. ಎಲ್ಲ ತಾಲ್ಲೂಕುಗಳ ಜನ ವಿಜಯನಗರ ಜಿಲ್ಲೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೊಸ ಜಿಲ್ಲೆ ರಚನೆಯಿಂದ ಜನರಿಗೆ ಅನುಕೂಲವಾಗುವುದರೊಂದಿಗೆ ವಿಜಯನಗರ ಸಾಮ್ರಾಜ್ಯದ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ’ ಎಂದು ವಿವರಿಸಿದ್ದಾರೆ.

‘ಹೊಸಪೇಟೆಯು ಪಶ್ಚಿಮ ತಾಲ್ಲೂಕುಗಳಿಗೆ ಸಮಾನ ದೂರದಲ್ಲಿದೆ. ಅಲ್ಲದೇ ಒಂದು ಜಿಲ್ಲಾ ಕೇಂದ್ರದಲ್ಲಿರಬೇಕಾದ ಎಲ್ಲ ಸವಲತ್ತುಗಳಿವೆ. ಹೀಗಾಗಿ ಹೊಸಪೇಟೆ ಕೇಂದ್ರವಾಗಿಸಿ ಜಿಲ್ಲೆ ರಚಿಸುವುದು ಸೂಕ್ತ. ನೂತನ ಜಿಲ್ಲೆ ರಚನೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತಾಲ್ಲೂಕುಗಳು ಅಭಿವೃದ್ಧಿ ಕಾಣಲಿವೆ’ ಎಂದು ತಿಳಿಸಿದ್ದಾರೆ.

ಮುಖಂಡರಾದ ಮಲ್ಲಾರಿ ದೀಕ್ಷಿತ್, ವೈ.ಯಮುನೇಶ್, ಗುಜ್ಜಲ ನಾಗರಾಜ, ಎಂ.ಸಿ.ವೀರಸ್ವಾಮಿ, ತಾರಿಹಳ್ಳಿ ಹನುಮಂತಪ್ಪ, ಎಸ್.ಗಾಳೆಪ್ಪ, ಕೆ.ರಾಮಪ್ಪ, ಚಂದ್ರಬಾಬು, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಎಲ್.ರಮೇಶ್, ಖಾಜಾ ಹುಸೇನ್ ನಿಯಾಜಿ, ಸಣ್ಣ ಮಾರೆಪ್ಪ, ಸೋಮಶೇಖರ್ ಬಣ್ಣದ ಮನೆ, ಆಜಾದ್, ಬೋಡಾ ರಾಮಪ್ಪ, ವಿಶ್ವನಾಥ ಕೌತಾಳ್, ಅಶ್ವತಪ್ಪ, ಬಿ.ಟಿ.ಮಂಜುನಾಥ, ಸಿ.ಆರ್.ಭರತ್ ಕುಮಾರ್, ಬಿ.ಗುರುಮೂರ್ತಿ, ಎಚ್.ಎಲ್.ಮಂಜುನಾಥ, ಮಲ್ಲಿನಾಥ, ರಾಜಕುಮಾರ್, ಓಬಳೇಶ್, ವಿ.ಸೋಮಪ್ಪ, ಚಂದ್ರು, ಕೇಶವ, ಬಿ.ಮಾರೆಣ್ಣ, ಕುಬೇರ ದಲ್ಲಾಳಿ, ಶಾಮ್‍ರಾಜ್ ಇದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.