ADVERTISEMENT

ರ್‍ಯಾಪಿಡ್‌ ಟೆಸ್ಟ್‌ ನಡೆಸಿ ವಿಶೇಷ ಆರೈಕೆಗೆ ತೀರ್ಮಾನ: ಶೇಕ್‌ ತನ್ವೀರ್‌ ಆಸಿಫ್‌

‘ಕಾಯಿಲೆ ಇರುವವರ ಗುರುತಿಸಲು ವಾರ್ಡ್‌ ಸಮಿತಿ’

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 9:39 IST
Last Updated 11 ಜುಲೈ 2020, 9:39 IST
ಉಪವಿಭಾಗಾಧಿಕಾರಿ ಶೇಕ್ ತನ್ವೀರ್‌ ಆಸಿಫ್‌
ಉಪವಿಭಾಗಾಧಿಕಾರಿ ಶೇಕ್ ತನ್ವೀರ್‌ ಆಸಿಫ್‌   

ಹೊಸಪೇಟೆ: ‘ಶ್ವಾಸಕೋಶ, ಹೃದಯ ರೋಗ ಸೇರಿದಂತೆ ಇತರೆ ಕಾಯಿಲೆ ಹೊಂದಿರುವವರು ಕೊರೊನಾ ಸೋಂಕು ತಗುಲಿದ ನಂತರ ಬೇಗ ಸಾವನ್ನಪ್ಪುತ್ತಿದ್ದಾರೆ. ವಿವಿಧ ಪ್ರಕಾರದ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ, ಅವರಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಿ ಅವರ ಪ್ರಾಣ ಉಳಿಸಲು ವಾರ್ಡ್‌ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ತಿಳಿಸಿದರು.

‘ಎಲ್ಲ ಸಮಿತಿಗಳು ನಗರಸಭೆ ಪೌರಾಯುಕ್ತರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತವೆ. ಆಯಾ ವಾರ್ಡ್‌ಗಳಲ್ಲಿ ಮಾಜಿ ನಗರಸಭೆ ಸದಸ್ಯರು ಸೇರಿದಂತೆ ಸ್ಥಳೀಯ ಎಂಟರಿಂದ ಹತ್ತು ಜನ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಗಳು ಆ ವಾರ್ಡ್‌ ವ್ಯಾಪ್ತಿಯಲ್ಲಿ ಅಸ್ತಮಾ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರ ಮಾಹಿತಿ ಸಂಗ್ರಹಿಸುತ್ತದೆ. ಬಳಿಕ ಅವರಿಗೆ ರ್‍ಯಾಪಿಡ್‌ ಟೆಸ್ಟ್‌ ನಡೆಸಲಾಗುತ್ತದೆ. ಒಂದುವೇಳೆ ಅವರಲ್ಲಿ ಸೋಂಕಿರುವುದು ದೃಢಪಟ್ಟರೆ ಅವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕೊರೊನಾ ಸೋಂಕಿನಿಂದ ಆರೋಗ್ಯವಂತರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ವಿವಿಧ ಪ್ರಕಾರದ ಕಾಯಿಲೆ ಇದ್ದವರೆ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದುತ್ತಿದ್ದಾರೆ. ಅಂತಹವರನ್ನು ರಕ್ಷಿಸುವ ಉದ್ದೇಶದಿಂದ ಈ ಸಮಿತಿಗಳನ್ನು ರಚಿಸಲಾಗುತ್ತಿದೆ. ಇದು ಇಡೀ ರಾಜ್ಯದಲ್ಲಿಯೇ ವಿಶೇಷ, ಹೊಸ ಪ್ರಯೋಗ. ಈ ಸಮಿತಿಗಳು ಸೋಮವಾರದಿಂದ (ಜು.13) ಕೆಲಸ ನಿರ್ವಹಿಸಲಿವೆ. ಯಾವುದೇ ರೀತಿಯ ಕಾಯಿಲೆಯಿಂದ ಬಳಲುತ್ತಿರುವವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಪರೀಕ್ಷೆಗೆ ಒಳಪಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ, ಈಗ ಹೊಸದಾಗಿ ಸೋಂಕು ತಗುಲಿದವರು ಮನೆಯಲ್ಲೇ ಐಸೋಲೇಷನ್‌ನಲ್ಲಿ ಇರಬಹುದು. ಅವರ ಮನೆಗೆ ಕೆಂಪು ಸ್ಟಿಕ್ಕರ್‌ ಅಂಟಿಸಲಾಗುತ್ತದೆ. ಅವರ ಸಂಪರ್ಕಕ್ಕೆ ಬಂದವರ ಮನೆಗೆ ಹಳದಿ ಬಣ್ಣದ ಸ್ಟಿಕ್ಕರ್‌ ಅಂಟಿಸಲಾಗುವುದು. ಪ್ರತಿದಿನ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ’ ಎಂದು ವಿವರಿಸಿದರು.

‘ನಗರ ಹೊರವಲಯದ ಜಂಬುನಾಥಹಳ್ಳಿ ಗುಡ್ಡದ ಬಳಿ 100 ಹಾಸಿಗೆ ಕೇರ್‌ ಸೆಂಟರ್‌ ತೆರೆಯಲಾಗಿದೆ. ಈಗಾಗಲೇ 30 ಕೋವಿಡ್‌ ರೋಗಿಗಳಿಗೆ ಅಲ್ಲಿ ಆರೈಕೆ ಮಾಡಲಾಗುತ್ತಿದೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 36 ಹಾಸಿಗೆಗೆ ವ್ಯವಸ್ಥೆ ಮಾಡಲಾಗಿದೆ. ಸಾಧಾರಣ ಜ್ವರ ಇದ್ದವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಲಕ್ಷಣ ತೀವ್ರವಾಗಿದ್ದರೆ ಅವರನ್ನು ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು’ ಎಂದು ತಿಳಿಸಿದರು.

‘ಹೊಸಪೇಟೆಯಲ್ಲಿ ಒಟ್ಟು 331 ಜನರಿಗೆ ಸೋಂಕು ತಗುಲಿದ್ದು, 218 ಕಂಟೈನ್ಮೆಂಟ್‌ ಪ್ರದೇಶಗಳಿವೆ. ನಾಲ್ಕು ಜನ ಸಾವನ್ನಪ್ಪಿದ್ದಾರೆ. ಮಾಸ್ಕ್‌ ಧರಿಸದವರು, ಅಂತರ ಕಾಯ್ದುಕೊಳ್ಳದೇ ವ್ಯವಹರಿಸುತ್ತಿದ್ದವರ ಮೇಲೆ ಒಟ್ಟು ₹2.50 ಲಕ್ಷ ದಂಡ ಹೇರಲಾಗಿದೆ. ಇದು ನಿರಂತರವಾಗಿ ಮುಂದುವರಿಯಲಿದೆ’ ಎಂದು ಎಚ್ಚರಿಸಿದರು. ತಹಶೀಲ್ದಾರ್ ಎಚ್‌. ವಿಶ್ವನಾಥ್‌, ಡಿವೈಎಸ್ಪಿ ವಿ. ರಘುಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.