ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಅನಂತನಹಳ್ಳಿ ಬಳಿಯಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ನಿರ್ಮಿಸಿರುವ ನೂತನ ಹಾಸ್ಟೆಲ್ ಕಟ್ಟಡ ಇದುವರೆಗೆ ವಿದ್ಯಾರ್ಥಿಗಳ ಬಳಕೆಗೆ ಮುಕ್ತವಾಗಿಲ್ಲ.
ಕಟ್ಟಡ ಉಪಯೋಗಿಸದ ಕಾರಣ ಪಾಳು ಬೀಳುವ ಹಂತಕ್ಕೆ ತಲುಪಿದೆ. ಕಟ್ಟಡದ ಆಸುಪಾಸಿನಲ್ಲಿ ಅಪಾರ ಹುಲ್ಲು ಬೆಳೆದಿದೆ. 2012ರಲ್ಲಿ ₹99 ಲಕ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿತ್ತು. ನಾಲ್ಕು ವರ್ಷಗಳ ತರುವಾಯ, ಅಂದರೆ 2016ರ ಜೂ.6ರಂದು ಕಟ್ಟಡ ಉದ್ಘಾಟಿಸಲಾಗಿತ್ತು. ಈಗ ಮತ್ತೆ ಆರು ವರ್ಷ ಕಳೆದರೂ ಕಟ್ಟಡ ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಂಡಿಲ್ಲ.
₹1.50 ಕೋಟಿ ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಲಾಗುತ್ತಿದೆ. ಒಳಾಂಗಣ ಕೆಲಸವಷ್ಟೇ ಬಾಕಿ ಉಳಿದಿದೆ. ಈ ಹಾಸ್ಟೆಲ್ ಆರಂಭದಿಂದ ಅಂದಾಜು 200 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ, ಇದುವರೆಗೆ ಹಳೆಯ ಕಟ್ಟಡವನ್ನೇ ಬಳಸುತ್ತಿಲ್ಲ. ಹೊಸ ಕಟ್ಟಡಕ್ಕೂ ಇಂತಹುದೇ ಪರಿಸ್ಥಿತಿ ಬರಬಾರದು ಎನ್ನುತ್ತಾರೆ ವಿದ್ಯಾರ್ಥಿಗಳು.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತೃತೀಯ ವರ್ಷದಲ್ಲಿ 99 ವಿದ್ಯಾರ್ಥಿಗಳು, ದ್ವಿತೀಯ ವರ್ಷದಲ್ಲಿ 175 ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 252 ವಿದ್ಯಾರ್ಥಿಗಳು ಪ್ರಥಮ ವರ್ಷದ ಡಿಪ್ಲೊಮಾ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದಾರೆ. ಇದರಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರಿದ್ದಾರೆ. ಹಾಸ್ಟೆಲ್ ಹಂಚಿಕೆ ಮಾಡದ ಕಾರಣ ಅವರೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ.
‘ಕಾಲೇಜಿನ ಕಟ್ಟಡ ಅರಣ್ಯದಂಚಿನಲ್ಲಿರುವ ಕಾರಣ, ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಹಾಸ್ಟೆಲ್ ಆರಂಭಿಸಲು ವಿಳಂಬ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈಗ ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ, ಈಗಲಾದರೂ ಆರಂಭಿಸಬೇಕು’ ಎಂದು ಹರಪನಹಳ್ಳಿ ನಿವಾಸಿ ಲೋಕೇಶ್ ಆಗ್ರಹಿಸಿದ್ದಾರೆ.
‘ಪಾಲಿಟೆಕ್ನಿಕ್ ಕಾಲೇಜಿನ ಎದುರು ಹೆಚ್ಚಿನ ಬಸ್‌ಗಳು ನಿಲುಗಡೆ ಮಾಡುವುದಿಲ್ಲ. ನಿತ್ಯ ಕಾಲೇಜಿಗೆ ಹೋಗಿ ಬರಲು ವಿದ್ಯಾರ್ಥಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾಲ್ನಡಿಗೆ ಅಥವಾ ಆಟೊಗಳ ಮೂಲಕ ಹೋಗಿ ಬರುತ್ತಾರೆ. ಬೇಗ ಹಾಸ್ಟೆಲ್ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಾರಿಗೆ ಸಂಸ್ಥೆಯವರು ಕಡ್ಡಾಯವಾಗಿ ಬಸ್ ನಿಲುಗಡೆ ಮಾಡಬೇಕು’ ಎಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ (ಎ.ಐ.ಎಸ್.ಎಫ್.) ರಾಜ್ಯ ಕಾರ್ಯದರ್ಶಿ ರಮೇಶ ನಾಯ್ಕ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.