ADVERTISEMENT

ಹೂವಿನಹಡಗಲಿಯಲ್ಲಿ ಮೈಲಾರ ಜಾತ್ರೆ: ಸಿದ್ಧತೆ ಜೋರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:54 IST
Last Updated 31 ಜನವರಿ 2026, 7:54 IST
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದ ಜಾತ್ರಾ ಮೈದಾನದಲ್ಲಿ ಚರಂಡಿ ಹೂಳು ತೆಗೆಯಲಾಯಿತು
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದ ಜಾತ್ರಾ ಮೈದಾನದಲ್ಲಿ ಚರಂಡಿ ಹೂಳು ತೆಗೆಯಲಾಯಿತು   

ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ, ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಫೆ. 4ರಂದು ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ ನಡೆಯಲಿರುವ ಕಾರಣ ಸಿದ್ಧತೆಗಳು ಭರದಿಂದ ಸಾಗಿವೆ.

ಜಿಲ್ಲಾಡಳಿತದ ನಿರ್ದೇಶನದಂತೆ ವಿವಿಧ ಇಲಾಖೆಗಳು ಸಿದ್ಧತೆ ಆರಂಭಿಸಿವೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮೂಲಸೌಕರ್ಯ ವ್ಯವಸ್ಥೆ ಹಾಗೂ ಧಾರ್ಮಿಕ ಕಾರ್ಯಗಳ ಸಿದ್ಧತೆಗಳು ನಡೆದಿವೆ. ಗ್ರಾಮ ಪಂಚಾಯಿತಿ ವತಿಯಿಂದ ತಿಪ್ಪೆಗಳನ್ನು ತೆರವುಗೊಳಿಸಿ, ಚರಂಡಿಗಳನ್ನು ಶುಚಿಗೊಳಿಸಲಾಗಿದೆ. ಜಾತ್ರಾ ಮೈದಾನ ಸ್ವಚ್ಛಗೊಳಿಸಿ, ಫಾಗಿಂಗ್ ಮಾಡಿಸಲಾಗಿದೆ.

ಸುಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕ, ಜಾತ್ರಾ ಮೈದಾನ ಹಾಗೂ ಭಕ್ತರು ಹೆಚ್ಚು ಸೇರುವ ಜಾಗಗಳಲ್ಲಿ ನೀರಿನ ಸ್ಟ್ಯಾಂಡ್ ಪೋಸ್ಟ್‌ಗಳನ್ನು ಅಳವಡಿಸಲಾಗಿದೆ. 18 ಸಿಸ್ಟರ್ನ್‌ಗಳು, ಜಾನುವಾರು ತೊಟ್ಟಿಗಳನ್ನು ಸ್ವಚ್ಛಗೊಳಿಸಿ ನೀರು ಸಂಗ್ರಹಕ್ಕೆ ಸಜ್ಜುಗೊಳಿಸಲಾಗಿದೆ. ನದಿ ತೀರದಲ್ಲಿ 400 ತಾತ್ಕಾಲಿಕ ಶೌಚಾಲಯ ಹಾಕಲಾಗಿದೆ.

ADVERTISEMENT

ದೇವಸ್ಥಾನ ಹಾಗೂ ಮುಖ್ಯ ಬೀದಿಗೆ ದೀಪಾಲಂಕಾರದ ಸಿದ್ಧತೆ ನಡೆದಿದೆ. ಕ್ಷೇತ್ರದ ಮೂರು ದಿಕ್ಕುಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ಡೆಂಕನಮರಡಿಯಲ್ಲಿ ಭದ್ರತೆಗಾಗಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಫೆ. 1ರಂದು ಭಾರತ ಹುಣ್ಣಿಮೆ ಆಚರಣೆಗೆ ಹೆಚ್ಚಿನ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಅಷ್ಟರೊಳಗೆ ಎಲ್ಲ ಸಿದ್ಧತೆ ಪೂರ್ಣಗೊಳಿಸಲು ವಿವಿಧ ಇಲಾಖೆಗಳ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

‘ಸುಕ್ಷೇತ್ರದಲ್ಲಿ ನೈರ್ಮಲ್ಯ, ಕುಡಿಯುವ ನೀರು ಪೂರೈಕೆ, ಕರ ವಸೂಲಿ ಕೆಲಸಗಳಿಗೆ ತಾಲ್ಲೂಕು ಪಂಚಾಯಿತಿಯಿಂದ 45 ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಸಿದ್ಧತಾ ಕೆಲಸಗಳು ನಡೆದಿವೆ’ ಎಂದು ಮೈಲಾರ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ ಸಂಶಿ ತಿಳಿಸಿದರು.

ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದ ನದಿ ತೀರದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.