
ವಿದ್ಯುತ್
ಹೂವಿನಹಡಗಲಿ: ತಾಲ್ಲೂಕಿನ ಮಕರಬ್ಬಿ ಗ್ರಾಮದ ಹೊರ ವಲಯದ ಕಂದಾಯ ಜಮೀನುಗಳಲ್ಲಿ ಮನೆ, ಗುಡಿಸಲು ಕಟ್ಟಿಕೊಂಡು ದಶಕಗಳಿಂದ ವಾಸಿಸುತ್ತಿರುವ ಕುರಿಗಾಹಿ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
‘ಬೆಳಗಾವಿ ಜಿಲ್ಲೆ ಚಿಕ್ಕೋಡಿಯಿಂದ ವಲಸೆ ಬಂದಿರುವ 20ಕ್ಕೂ ಹೆಚ್ಚು ಕುರಿಗಾಹಿ ಕುಟುಂಬಗಳು ತಾಲ್ಲೂಕಿನ ಮಕರಬ್ಬಿ ಗ್ರಾಮದಲ್ಲಿ ತುಂಡು ಭೂಮಿ ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಗ್ರಾಮ ಠಾಣಾ ಹೊರಗಿರುವ ಕಾರಣಕ್ಕೆ ಮನೆಗಳು ಗ್ರಾಮ ಪಂಚಾಯಿತಿ ದಾಖಲೆಗಳಲ್ಲಿ ಸೇರ್ಪಡೆಯಾಗಿಲ್ಲ. ಈ ತಾಂತ್ರಿಕ ಕಾರಣದಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ಇರುವುದರಿಂದ ನಾನಾ ಸಮಸ್ಯೆ ಎದುರಿಸುವಂತಾಗಿದೆ’ ಎಂದು ತಿಳಿಸಿದ್ದಾರೆ.
ಗ್ರಾಮದ ಹೊರ ವಲಯದಲ್ಲಿ ಕಾಡು ಪ್ರಾಣಿಗಳು, ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಕತ್ತಲೆಯಲ್ಲಿ ವಾಸಿಸುವಂತಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿಗೆ, ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದವರು ವಿಶೇಷ ಪ್ರಕರಣವೆಂದು ಪರಿಗಣಿಸಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಕುರಿಗಾಹಿಗಳಾದ ಸಿದ್ದಪ್ಪ, ಡಿ.ಪರಶುರಾಮ, ವಿಠಲ, ಶೃತಿ, ಕೋಟೆಪ್ಪ, ಸಂತೋಷ, ವಾಸು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.