
ಬಳ್ಳಾರಿ: ಸುತ್ತಲ ನೂರಾರು ಎಕರೆ ಪ್ರದೇಶದಲ್ಲಿ 15 ವರ್ಷಗಳಿಂದ ಒಂಟಿಯಾಗಿ ನಿಂತಿದ್ದ ಪಾಳುಬಿದ್ದ ಪರಿತ್ಯಕ್ತ ಮನೆಯೊಂದು ಈಗ ಬಳ್ಳಾರಿಯಲ್ಲಿ ರಾಜಕೀಯ ಕಿಚ್ಚು ಹೊತ್ತಿಕೊಳ್ಳಲು ಕಾರಣವಾಗಿದೆ.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ರಾಜಕೀಯವಾಗಿ ಪ್ರವರ್ದಮಾನದಲ್ಲಿದ್ದಾಗ 2010–11ರಲ್ಲಿ ರುಕ್ಮಿಣಮ್ಮ–ಚೆಂಗಾರೆಡ್ಡಿ ಬಡಾವಣೆ (ಜಿ ಸ್ಕ್ವೇರ್) ನಿರ್ಮಾಣ ಮಾಡಿದ್ದರು. ಜನಾರ್ದನ ರೆಡ್ಡಿ ಅವರು ಹೇಳುವ ಪ್ರಕಾರ ಈ ಬಡಾವಣೆ 80 ಎಕರೆ ಪ್ರದೇಶವನ್ನು ವ್ಯಾಪಿಸಿದೆ.
ಸಾಮಾನ್ಯವಾಗಿ ಯಾವುದೇ ಬಿಲ್ಡರ್ ಬಡಾವಣೆಯೊಂದನ್ನು ಅಭಿವೃದ್ಧಿ ಪಡಿಸಿದಾಗ ‘ಮಾಡೆಲ್ ಹೌಸ್’ ಅನ್ನು ನಿರ್ಮಾಣ ಮಾಡುತ್ತಾರೆ. ನಿವೇಶನ ಖರೀದಿಸಲು ಬರುವ ಗ್ರಾಹಕರಿಗೆ ಈ ಮನೆ ತೋರಿಸಿ, ಸೆಳೆಯುವುದು ಈ ಮಾಡೆಲ್ ಹೌಸ್ ನಿರ್ಮಾಣದ ಹಿಂದಿನ ತಂತ್ರ. ನಿವೇಶನಗಳು ಮಾರಾಟವಾದ ಬಳಿಕೆ ಕೆಲವರು ಇಂಥ ಮನೆಗಳನ್ನೂ ಮಾರಾಟ ಮಾಡುತ್ತಾರೆ. ಕೆಲವರು ಹಾಗೆ ಉಳಿಸಿಕೊಳ್ಳುತ್ತಾರೆ.
‘ಜಿ–ಸ್ಕ್ವೇರ್’ನಲ್ಲಿಯೂ ಮಾಡೆಲ್ ಹೌಸ್ ನಿರ್ಮಾಣ ಮಾಡಲಾಗಿದೆ. ಮಾಡೆಲ್ ಹೌಸ್ ಸುಸಜ್ಜಿತ ಕಟ್ಟಡವಾಗಿದ್ದು ಎಲ್ಲ ರೀತಿಯಿಂದಲೂ ಐಷಾರಾಮಿಯಾಗಿದೆ. ಆದರೆ, ಅದು ಹೇಗಿದೆಯೋ ಹಾಗೇ ಬಿಟ್ಟು ಹೋಗಲಾಗಿದೆ. ಬಡಾವಣೆಯಲ್ಲಿ ನಿವೇಶನಗಳು ಮಾರಾಟವಾದ ಸಾಧ್ಯತೆಗಳಿಲ್ಲ. ಒಂದೇ ಒಂದು ಮನೆಯೂ ನಿರ್ಮಾಣವಾಗಿಲ್ಲ. ಹೀಗಾಗಿ ಜನಾರ್ದನ ರೆಡ್ಡಿ ಅವರ ಒಡೆತನದ ಮಾದರಿ ಮನೆ ಒಂಟುಯಾಗಿ ಪಾಳು ಬಿದ್ದ ಸ್ಥಿತಿಯಲ್ಲಿದೆ.
ಈ ಮನೆ ಇತ್ತೀಚಿನ ವರ್ಷಗಳಲ್ಲಿ ಅನೈತಿಕ ತಾಣವಾಗಿ ಪರಿವರ್ತನೆಯಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಫೋಟೊ ಶೂಟ್‌ಗೆ ಮಾತ್ರವಲ್ಲದೇ ಧೂಮಪಾನ, ಮಧ್ಯಪಾನ, ಗಾಂಜಾ, ಡ್ರಗ್ಸ್ ತೆಗೆದುಕೊಳ್ಳಲು, ಲೈಂಗಿಕ ಚಟುವಟಿಕೆಗಳಿಗೂ ಈ ಮನೆ ಆಶ್ರಯ ಒದಗಿಸಿತ್ತು ಎಂದು ಹೇಳಲಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಮನೆಯ ಆವರಣದಲ್ಲಿ ಜಾಲಿ ಮರಗಳು ಬೆಳೆದುಕೊಂಡಿವೆ. ಮನೆಯ ಬಾಗಿಲನ್ನು ಮುರಿದು ಅದ್ಯಾವುದೋ ಕಾಲವಾದಂತಿದೆ. ಮನೆಯ ಎಲ್ಲೆಂದರಲ್ಲಿ ಸಿಗರೇಟು ಬಡ್ಸ್‌ಗಳು, ಬೆಂಕಿಪೊಟ್ಟಣ, ಕಸ ಹರಡಿಕೊಂಡಿದೆ. ದುಷ್ಕರ್ಮಿಗಳಿಗಾಗಿಯೇ ಜನಾರ್ದನ ರೆಡ್ಡಿ ಈ ವೈಭವೋಪೇತ ಮನೆಯನ್ನು ನಿರ್ಮಿಸಿದ್ದರೋ ಏನೋ ಎಂಬಂಥ ಸ್ಥಿತಿ ಇದೆ.
ಹೀಗೆ ಹಲವಾರು ವರ್ಷಗಳಿಂದ ಒಂಟಿಯಾಗಿ ಚಳಿ, ಮಳೆ, ಬಿಸಿಲಿಗೆ ಮೈ ಒಡ್ಡಿಕೊಂಡಿದ್ದ ಈ ಮನೆ ಈಗ ತಾನು ಬೆಂಕಿಗೆ ಆಹುತಿಯಾಗಿದ್ದೂ ಅಲ್ಲದೇ, ಏಕಾಏಕಿ ಜಿಲ್ಲೆಯ ರಾಜಕೀಯ ದ್ವೇಷಕ್ಕೂ ಬೆಂಕಿ ಇಟ್ಟಿದೆ.
ಭದ್ರತೆ ಇಲ್ಲ
ಬಡಾವಣೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೆ ಮಾದರಿ ಮನೆಗೆ ಪ್ರತ್ಯೇಕವಾಗಿ ಭದ್ರತೆ ಒದಗಿಸಿಲ್ಲ. ಕನಿಷ್ಠ ಸಿಸಿಟಿವಿ ಕ್ಯಾಮೆರಾವನ್ನಾದರೂ ಹಾಕಿಲ್ಲ. ಹೀಗಾಗಿ ಮನೆಗೆ ಬರುವವರ ಮೇಲೆ ನಿಯಂತ್ರಣವೇ ಇಲ್ಲ ಎಂಬಂತಿದೆ.
ಬೆಂಕಿ ಬಿದ್ದ ಸಂದರ್ಭ ಸರಿ ಇಲ್ಲ
ಬೇರೆ ಯಾವುದೇ ಸಮಯದಲ್ಲಿ ಈ ಮನೆಗೆ ಬೆಂಕಿ ಬಿದ್ದಿದ್ದರೆ ಅದೊಂದು ಸಣ್ಣ ಸುದ್ದಿಯಾಗುತ್ತಿತ್ತು. ಆದರೆ, ದೊಡ್ಡ ವಿವಾದವಾಗಲು ಸದ್ಯದ ಸನ್ನಿವೇಶವೇ ಕಾರಣ ಎಂಬುದು ಜನರ ಅಭಿಮತ.
ಜ. 1ರಂದು ನಡೆದ ಘರ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ‘ನಮ್ಮ ಬಳಿಯೂ ಎಲ್ಲ ಇದೆ. ಜನಾರ್ದನ ರೆಡ್ಡಿ ಅವರ ಮನೆಯನ್ನು ನಾನು ಸುಟ್ಟುಹಾಕಬಲ್ಲೆ’ ಎಂದಿದ್ದರು. ಹೀಗಾಗಿಯೇ, ಘಟನೆಯನ್ನು ಅವರ ತಲೆಗೆ ಕಟ್ಟುವ ಮಾತುಗಳು ಕೇಳಿಬಂದಿವೆ. ಆದರೆ, ಪೊಲೀಸರು ಇದನ್ನು ತಳ್ಳಿ ಹಾಕಿದ್ದಾರೆ.
ಮನೆ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಕಸ ಬಿದ್ದಿದೆ, ಗಾಜುಗಳು ಪುಡಿಯಾಗಿವೆ. ಮನೆಯಲ್ಲಿ ಯಾರೂ ವಾಸವಿಲ್ಲ. ಸಿಸಿಟಿವಿಯೂ ಇಲ್ಲ. ಭದ್ರತೆಗೆಂದು ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ ಎಂಬುದು ಕಂಡು ಬಂದಿದೆ.ಸುಮನ್ ಪೆನ್ನೇಕರ್, ಬಳ್ಳಾರಿ ಎಸ್‌ಪಿ
ಈ ಲೇಔಟ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ, ಕಳ್ಳತನವಾಗಿದೆ ಎಂದು ನಾಲ್ಕು ತಿಂಗಳ ಹಿಂದೆಯೇ ದೂರು ಕೊಟ್ಟಿದ್ದೇವೆ. ಮನೆಯಲ್ಲಿ ಯಾರು ಇಲ್ಲ, ಕಟ್ಟಡ ಪಾಳು ಬಿದ್ದಿದೆ ಎಂದು ಎಸ್ಪಿಯವರಿಗೆ ತಪ್ಪು ಮಾಹಿತಿ ನೀಡಲಾಗಿದೆ.ಜನಾರ್ದನ ರೆಡ್ಡಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.