ಹೊಸಪೇಟೆ (ವಿಜಯನಗರ): ‘ವಿಜಯನಗರ ಜಿಲ್ಲೆ ಘೋಷಣೆಯಾದ ನಂತರ ಆಚರಿಸಲಾಗುವ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುವುದು’ ಎಂದು ಉಪವಿಭಾಗಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.
‘ಕೋವಿಡ್ ಮಾರ್ಗಸೂಚಿಯೊಂದಿಗೆ ಅತ್ಯಂತ ಸಂಭ್ರಮದಿಂದ ಸ್ವಾತಂತ್ರ್ಯ ದಿನ ಆಚರಿಸಲಾಗುವುದು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಮಾ.ಬ.ಸೋಮಣ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು’ ಎಂದು ಬುಧವಾರ ನಗರದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಗಣರಾಜ್ಯೋತ್ಸವ ಆಚರಿಸಿದ ರೀತಿಯಲ್ಲೇ ಶಾಲಾ ಮಕ್ಕಳನ್ನು ಒಟ್ಟುಗೂಡಿಸಿ, ಜನಜಂಗುಳಿ ಆಗದಂತೆ ಸೀಮಿತ ಜನರೊಂದಿಗೆ ಆಚರಿಸಬೇಕು. ಬೆಳಿಗ್ಗೆ 7.30ಕ್ಕೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು. 8.30ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ಧ್ವಜಾರೋಹಣ ಹಾಗೂ ಪಥಸಂಚಲನ ಜರುಗಲಿದೆ. ಸಚಿವ ಆನಂದ್ ಸಿಂಗ್ ಅಥವಾ ವಿಶೇಷ ಅಧಿಕಾರಿ ಅನಿರುದ್ಧ ಪಿ. ಶ್ರವಣ್ ಧ್ವಜಾರೋಹಣ ನೆರವೇರಿಸುವರು’ ಎಂದು ತಿಳಿಸಿದರು.
‘ಪೊಲೀಸ್ ಪಡೆ, ಗೃಹರಕ್ಷಕ ದಳ, ವಿಜಯನಗರ ಮತ್ತು ಶಂಕರ್ ಆನಂದ್ ಸಿಂಗ್ ಕಾಲೇಜಿನ ಎನ್‌ಸಿಸಿ ತಂಡಗಳು ಪರೇಡ್‌ನಲ್ಲಿ ಭಾಗವಹಿಸುವರು. ವಡಕರಾಯ ದೇವಸ್ಥಾನದಿಂದ ತಾಲ್ಲೂಕು ಕ್ರೀಡಾಂಗಣದ ವರೆಗೆ ಸ್ಫೂರ್ತಿ ವೇದಿಕೆಯ ಸದಸ್ಯರು ಸ್ವಾತಂತ್ರ್ಯ ಜ್ಯೋತಿಯನ್ನು ತೆಗೆದುಕೊಂಡು ಬರುವರು’ ಎಂದರು.
ತಹಶೀಲ್ದಾರ್ ಎಚ್.ವಿಶ್ವನಾಥ್, ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.