ADVERTISEMENT

ಒಳ ಮೀಸಲಾತಿ ಶಿಫಾರಸು ಕಣ್ಣೊರೆಸುವ ತಂತ್ರ: ಹನುಮಂತಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 16:27 IST
Last Updated 20 ಜನವರಿ 2024, 16:27 IST

ಬಳ್ಳಾರಿ: ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಒಳ ಮೀಸಲಾತಿ ಕುರಿತು ಕೈಗೊಂಡ ನಿರ್ಧಾರ ದಲಿತರನ್ನು ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡು ಉಂಡೇನಾಮ ಹಾಕುವ ಕಪಟ ನೀತಿಯಲ್ಲದೆ ಮತ್ತೇನಲ್ಲ ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹನುಮಂತಪ್ಪ ಆರೋಪಿಸಿದ್ದಾರೆ.

ಅಪ್ರಸ್ತುತವಾದ ಸಂವಿಧಾನದ 341ನೇ ವಿಧಿ ತಿದ್ದುಪಡಿಯ ಗುಮ್ಮವನ್ನು ತೋರಿಸಿ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೆ. ಶೇ 15ರ ಮೀಸಲಾತಿಯನ್ನು ವರ್ಗೀಕರಿಸಿದ್ದ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಯತ್ನಿಸಿದೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

2020 ಆಗಸ್ಟ್ 27 ರಂದು ಸುಪ್ರೀಂಕೋರ್ಟಿನ ನ್ಯಾ ಅರುಣ್ ಮಿಶ್ರಾ ನೇತೃತ್ವದ ಪಂಚಪೀಠ ಮೀಸಲಾತಿಯ ವರ್ಗೀಕರಣದ ವಿಷಯದಲ್ಲಿ 341ನೇ ವಿಧಿಯ ತಿದ್ದುಪಡಿಯ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಈ ಐತಿಹಾಸಿಕ ತೀರ್ಪು ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ವಿಚಾರಣೆಗೆ ಬಂದಿರುವಾಗ ವಕೀಲ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂತಹದೊಂದು ಅಗ್ಗದ ನಿರ್ಣಯ ಕೈಗೊಂಡು ನಗೆಪಾಟಲಿಗೆ ಈಡಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ADVERTISEMENT

ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ಕೇಂದ್ರ ಸರ್ಕಾರ ಒಳ ಮೀಸಲಾತಿಯ ಪರವಾಗಿ ಖುದ್ದು ವಕಾಲತ್ತು ವಹಿಸಿರುವಾಗ ಕರ್ನಾಟಕದ ಕಾಂಗ್ರೆಸ್ ಸರಕಾರದ ಈ ಟೊಳ್ಳು ನಿರ್ಣಯಕ್ಕೆ ಯಾರೂ ಮರುಳಾಗುವುದಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರೂ ಸೇರಿದಂತೆ ಬಹುತೇಕ ನಾಯಕರಿಗೆ ಒಳ ಮೀಸಲಾತಿಯ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂಬುದು ಗುಟ್ಟಿನ ವಿಷಯವಲ್ಲ ಎಂದಿದ್ದಾರೆ.

ಇತ್ತೀಚಿಗೆ ರಾಜ್ಯದೆಲ್ಲೆಡೆ ಮಾದಿಗ ಸಮಾವೇಶಗಳ ಅಭೂತಪೂರ್ವ ಯಶಸ್ಸಿನಿಂದ ಕೆಂಗೆಟ್ಟಿರುವ ಕಾಂಗ್ರೆಸ್ಸು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಇಂತಹ ನೀಚ ಕೃತ್ಯಕ್ಕೆ ಕೈಹಾಕಿದೆ. ಕಾಂಗ್ರೆಸ್ಸಿನ ಸಚಿವ ಸಂಪುಟದ ನಿರ್ಣಯವನ್ನು ಮಾದಿಗ ಸಮಾಜದ ನಾಯಕರು ಒಕ್ಕೊರಲಿನಿಂದ ಧಿಕ್ಕರಿಸುವುದಾಗಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.