ADVERTISEMENT

ಕಡೆಗಣನೆಗೆ ಒಳಗಾದ ಜೈನ ಬಸದಿ

ಅವಸಾನದಂಚಿನಲ್ಲಿ ಕೋಗಳಿ ಜೈನ ಮಂಟಪ; ವಿರೂಪಗೊಂಡಿರುವ ಚನ್ನಪಾರ್ಶ್ವನಾಥ ಮೂರ್ತಿ

ಸಿ.ಶಿವಾನಂದ
Published 26 ಸೆಪ್ಟೆಂಬರ್ 2018, 16:30 IST
Last Updated 26 ಸೆಪ್ಟೆಂಬರ್ 2018, 16:30 IST
ಅಂಕಸಮುದ್ರ ಪಕ್ಷಿಧಾಮದಲ್ಲಿರುವ ಬಣ್ಣದ ಕೊಕ್ಕರೆ 
ಅಂಕಸಮುದ್ರ ಪಕ್ಷಿಧಾಮದಲ್ಲಿರುವ ಬಣ್ಣದ ಕೊಕ್ಕರೆ    

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಕೋಗಳಿ ಗ್ರಾಮದಲ್ಲಿ ರಾಷ್ಟ್ರಕೂಟ ಅರಸರು ನಿರ್ಮಿಸಿದ ಜೈನ ಬಸದಿಗಳು, ಮಹಾವೀರನ ಮೂರ್ತಿ ಹಾಗೂ ಶಿಲಾ ಶಾಸನಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಕನ್ನಡದ ಮೊಟ್ಟಮೊದಲ ಗ್ರಂಥ ‘ವಡ್ಡರಾಧನೆ’ ರಚಿಸಿದ ಕವಿ ಶಿವಕೋಟ್ಯಾಚಾರ್ಯ ತಾಲ್ಲೂಕಿನ ಕೋಗಳಿ ಗ್ರಾಮದವರು. ಚಾಲುಕ್ಯರು, ಹೊಯ್ಸಳರ ಅಧಿಪತ್ಯದಲ್ಲಿದ್ದ ಈ ಊರಿನಲ್ಲಿ ಅವರು ಸುಂದರ ಕೆತ್ತನೆಯ ಬಸದಿಗಳನ್ನು ನಿರ್ಮಿಸಿದ್ದರು. ಆದರೆ, ಅವುಗಳು ಈಗ ಅವಸಾನದ ಅಂಚಿನಲ್ಲಿವೆ. ಪ್ರಾಚೀನ ಮಂಟಪಗಳು ಈಗ ಜಾನುವಾರುಗಳನ್ನು ಕಟ್ಟುವ ಜಾಗವಾಗಿ ಬದಲಾಗಿದೆ. ಇತ್ತೀಚಿನ ಕೆಲ ವರ್ಷಗಳಿಂದ ಈ ಮಂಟಪಗಳಲ್ಲಿ ಗಣಪನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹೀಗಿದ್ದರೂ ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಇಲ್ಲಿರುವ ಚನ್ನಪಾರ್ಶ್ವನಾಥ ತೀರ್ಥಂಕರನ ಮೂರ್ತಿಗೆ ರಕ್ಷಣೆ ಇಲ್ಲವಾಗಿದೆ. ಅದಕ್ಕೆ ಬಣ್ಣ ಬಳಿದು ವಿರೂಪಗೊಳಿಸಲಾಗಿದ್ದು, ಅವುಗಳನ್ನು ಸಂರಕ್ಷಿಸಬೇಕು ಎಂದು ನಾಗರಿಕರು ಆಗ್ರಹಿಸಿದರು.

ADVERTISEMENT

‘ಹಂಪಿಯಷ್ಟೇ ಮಹತ್ವ ಈ ಸ್ಥಳಕ್ಕೂ ಇದೆ. ಆದರೆ, ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶಾಸನಗಳು, ಶಿಲೆಗಳು, ಮಂಟಪ ಹಾಗೂ ಮೂರ್ತಿಗಳನ್ನು ಸಂರಕ್ಷಿಸಲು ಈಗಲಾದರೂ ಕ್ರಮ ಕೈಗೊಳ್ಳಬೇಕು. ಜೈನ ಬಸದಿ ಜೀರ್ಣೊದ್ಧಾರಗೊಳಿಸಿ, ಅದರ ಬಗ್ಗೆ ಪ್ರಚಾರ ಮಾಡಬೇಕು. ಆಗ ಪ್ರವಾಸಿಗರು ಬರುತ್ತಾರೆ. ಸ್ಥಳೀಯರಿಗೆ ಸಣ್ಣಪುಟ್ಟ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ’ ಎಂದು ಸ್ಥಳೀಯರಾದ ಎಚ್‌.ಎಂ. ವೀರೇಶ್‌, ಕಾಳಪ್ಪ, ಮಲ್ಲಿಕಾರ್ಜುನ ಹೇಳಿದರು.

ಅಂಬಳಿ ಕಲ್ಲೇಶ್ವರ ದೇವಸ್ಥಾನ:

ತಾಲ್ಲೂಕಿನ ಅಂಬಳಿ ಗ್ರಾಮದಲ್ಲಿ ಹತ್ತನೇ ಶತಮಾನದಲ್ಲಿ ನಿರ್ಮಾಣಗೊಂಡ ಕಲ್ಯಾಣಿ ಚಾಲುಕ್ಯರ ಕಾಲದ ಕಲ್ಲೇಶ್ವರ ದೇವಸ್ಥಾನವಿದೆ. ಈ ದೇಗುಲ ದಾವಣಗೆರೆ ವಿಭಾಗದ ಪುರಾತತ್ವ ಇಲಾಖೆಗೆ ಸೇರಿದೆ. ದೇಗುಲದ ಒಳಾಂಗಣ ಮತ್ತು ಹೊರಭಾಗದಲ್ಲಿ ಸುಂದರ ಕೆತ್ತನೆಗಳಿವೆ. ಆದರೆ, ಈ ಕುರಿತು ಸೂಕ್ತ ಪ್ರಚಾರ ಇಲ್ಲದ್ದರಿಂದ ಪ್ರವಾಸಿಗರಿಲ್ಲದೆ ಸೊರಗಿದೆ.
ತಂಬ್ರಹಳ್ಳಿಯ ಬಂಡೆರಂಗನಾಥ ದೇವಸ್ಥಾನ ಮಳೆಗಾಲದಲ್ಲಿ ನೋಡಲೇಬೇಕಾದ ಸ್ಥಳ. ಈ ಬೆಟ್ಟದ ಸುತ್ತಲೂ ತುಂಗಭದ್ರಾ ಹಿನ್ನೀರು ನಿಲ್ಲುವುದರಿಂದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.