ADVERTISEMENT

‘ಅಹಿಂಸೆ, ಸಮತೆಗೆ ಜೈನ ಸಾಹಿತ್ಯ ಒತ್ತು’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 14:44 IST
Last Updated 27 ಆಗಸ್ಟ್ 2019, 14:44 IST
ಕಾರ್ಯಕ್ರಮದಲ್ಲಿ ಬಾಂಬೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಪಿನ್‌ ದೋಷಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಬಾಂಬೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಪಿನ್‌ ದೋಷಿ ಮಾತನಾಡಿದರು   

ಹೊಸಪೇಟೆ: ‘ಅಹಿಂಸೆ ಮತ್ತು ಸಮತೆಗೆ ಜೈನ ಸಾಹಿತ್ಯ ಹೆಚ್ಚಿನ ಒತ್ತು ಕೊಟ್ಟಿರುವುದು ಅದರ ವಿಶೇಷ’ ಎಂದು ಬಾಂಬೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಪಿನ್‌ ದೋಷಿ ತಿಳಿಸಿದರು.

ಮಂಗಳವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭೇರಾಜ ಬಲ್ದೋಡ ಜೈನ ಅಧ್ಯಯನ ಪೀಠ ಆಯೋಜಿಸಿದ್ದ ಸಮಾರಂಭದಲ್ಲಿ ‘ಜೈನ ಸಾಹಿತ್ಯ ಮತ್ತು ತತ್ವಶಾಸ್ತ್ರ’ ಕುರಿತು ಮಾತನಾಡಿದರು.

‘ಕನ್ನಡ ಭಾಷೆಗೆ ಜೈನ ಸಾಹಿತ್ಯ ಕೊಟ್ಟಿರುವ ಕೊಡುಗೆ ಅಪಾರವಾದುದು. ಅಹಿಂಸೆ, ಸಮತಾಭಾವ, ಅಪರಿಗ್ರಹ ಸೇರಿದಂತೆ ಅನೇಕ ಉತ್ತಮವಾದ ಮೌಲ್ಯಗಳನ್ನು ನೀಡಿದೆ. ದೇಶದಲ್ಲಿ ಇರುವಂತಹ ಸೀಮಿತ ಸಂಪನ್ಮೂಲಗಳನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಂಡಿರುವುದನ್ನು ಜೈನ ಸಾಹಿತ್ಯದಲ್ಲಿ ಕಾಣಬಹುದು’ ಎಂದು ಹೇಳಿದರು.

ADVERTISEMENT

ಗುಜರಾತಿ ಸಾಹಿತಿ ಪ್ರೊ. ಸೇಜಲ್ ಷಾ ಮಾತನಾಡಿ, ‘ಕನ್ನಡದಲ್ಲಿ ಜೈನ ಪರಂಪರೆಗೆ ಸಂಬಂಧಪಟ್ಟಂತೆ ಸಾಕಷ್ಟು ವಿಚಾರಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗಿವೆ. ಪೊನ್ನನ ಶಾಂತಿನಾಥ ಪುರಾಣ, ರನ್ನನ ಅಜಿತನಾಥ ಪುರಾಣ ಪ್ರಸ್ತಾಪಿಸಿದರು. ಕೃತಕ ಬುದ್ಧಿಮತ್ತೆಯ ರೋಬೊಟ್‌ಗಳ ಸಂದರ್ಭದಲ್ಲಿ ಜೈನ ಸಾಹಿತ್ಯವು ಪ್ರೀತಿ, ವಿಶ್ವಾಸ, ಕರುಣೆಯಂತಹ ಹಲವಾರು ಅಂಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕೆಲಸ ಮಾಡಿದೆ’ ಎಂದರು.

ಎಂ.ಎಸ್.ಪಿಎಲ್. ಸಮೂಹ ಸಂಸ್ಥೆ ಅಧ್ಯಕ್ಷ ನರೇಂದ್ರ ಕುಮಾರ್ ಬಲ್ದೋಟ ಉದ್ಘಾಟಿಸಿ, ‘ಜೈನ ಸಾಹಿತ್ಯವು ಶಾಂತಿ, ಮಾನವೀಯತೆಗೆ ಪ್ರಾಮುಖ್ಯತೆ ನೀಡಿದೆ. ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಆರಂಭಿಸಬೇಕು’ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸ.ಚಿ.ರಮೇಶ, ‘ಜೈನ ಸಾಹಿತ್ಯವು ದೇಶದ ಇತರ ಎಲ್ಲಾ ಸಾಹಿತ್ಯಗಳಿಗಿಂತ ಭಿನ್ನವಾದುದು. ಜೈನ ಸಾಹಿತ್ಯದಲ್ಲಿ ಹಿಂಸೆಗೆ ಅವಕಾಶವಿಲ್ಲ. ಬದಲಾಗಿ ಮನುಷ್ಯನ ಮನಃ ಪರಿವರ್ತನೆಗೆ ದಾರಿಯಿದೆ. ಹೀಗಾಗಿ ಚರಿತ್ರೆಯಲ್ಲಿ ಬಹಳಷ್ಟು ವ್ಯಕ್ತಿಗಳು ಮನ ಪರಿವರ್ತನೆಗೊಂಡಿರುವುದನ್ನು ಕಾಣಬಹುದು’ ಎಂದರು.

ಕುಲಸಚಿವ ಎ.ಸುಬ್ಬಣ್ಣ ರೈ, ಪೀಠದ ಸಂಚಾಲಕ ಎಲ್. ಶ್ರೀನಿವಾಸ, ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಜನಾರ್ದನ, ಎಂ.ಎಸ್.ಪಿ.ಎಲ್.ನ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.