ADVERTISEMENT

ವಿಜಯನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಬಿ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 10:47 IST
Last Updated 1 ಡಿಸೆಂಬರ್ 2019, 10:47 IST
ಜೆ.ಡಿ.ಎಸ್‌. ಅಭ್ಯರ್ಥಿ ಎನ್‌.ಎಂ. ನಬಿ (ಬಲದಿಂದ ಮೊದಲನೆಯವರು) ಅವರು ಶುಕ್ರವಾರ ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ಹೋದಾಗ ಪಕ್ಷದ ಕಾರ್ಯಕರ್ತರು ಅವರನ್ನು ಬರಮಾಡಿಕೊಂಡರು
ಜೆ.ಡಿ.ಎಸ್‌. ಅಭ್ಯರ್ಥಿ ಎನ್‌.ಎಂ. ನಬಿ (ಬಲದಿಂದ ಮೊದಲನೆಯವರು) ಅವರು ಶುಕ್ರವಾರ ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ಹೋದಾಗ ಪಕ್ಷದ ಕಾರ್ಯಕರ್ತರು ಅವರನ್ನು ಬರಮಾಡಿಕೊಂಡರು   

ಹೊಸಪೇಟೆ: ವಿಜಯನಗರ ವಿಧಾನಸಭೆ ಉಪಚುನಾವಣೆಯ ಕಣದಲ್ಲಿರುವ ಜೆ.ಡಿ.ಎಸ್‌. ಅಭ್ಯರ್ಥಿ ಎನ್‌.ಎಂ. ನಬಿ ಅವರು ಶುಕ್ರವಾರ ಕ್ಷೇತ್ರ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ತಾಲ್ಲೂಕಿನ ಕಲ್ಲಹಳ್ಳಿ, ರಾಜಪುರ ಹಾಗೂ ಕಣಿವಿರಾಯ ಗ್ರಾಮಕ್ಕೆ ಭೇಟಿ ನೀಡಿ ಮತಯಾಚಿಸಿದರು. ಗ್ರಾಮದ ಪ್ರತಿಯೊಂದು ಓಣಿಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಚುನಾವಣೆಯಲ್ಲಿ ಜೆ.ಡಿ.ಎಸ್‌. ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

‘ಸತತ ಮೂರು ಸಲ ಆನಂದ್‌ ಸಿಂಗ್‌ ಅವರನ್ನು ಗೆಲ್ಲಿಸಿದ್ದೀರಿ. ಅವರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸಕ್ಕರೆ ಕಾರ್ಖಾನೆ ಮುಚ್ಚಿ ಹೋಗಿದ್ದು, ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದುವೇಳೆ ನಾನು ಗೆದ್ದರೆ ಆದ್ಯತೆಯ ಮೇರೆಗೆ ಅದನ್ನು ಆರಂಭಿಸುತ್ತೇನೆ’ ಎಂದು ಹೇಳಿದರು.

ADVERTISEMENT

‘ನಾನು ಹೊರಗಿನವರು ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕೂಡ್ಲಿಗಿಯಿಂದ ಗೆದ್ದು ಮಂತ್ರಿಯಾದಾಗ ಕ್ಷೇತ್ರದ ಜತೆ ಅವಿನಾಭಾವ ಸಂಬಂಧ ಹೊಂದಿದ್ದೆ. ವಾರದಲ್ಲಿ ನಾಲ್ಕೈದು ದಿನ ಹೊಸಪೇಟೆಗೆ ಬಂದು ಹೋಗುತ್ತೇನೆ. ಹೀಗಿರುವಾಗ ಹೊರಗಿನವನು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ತಿಳಿಸಿದರು.

‘ಸಿಂಗ್‌ ಅವರನ್ನು ಜನ ಐದು ವರ್ಷದ ಅವಧಿಗೆ ಆಯ್ಕೆ ಮಾಡಿದ್ದರು. ಆದರೆ, ಅವರು ಒಂದೂವರೆ ವರ್ಷದಲ್ಲಿ ರಾಜೀನಾಮೆ ನೀಡಿದ್ದಾರೆ. ಈಗ ಪುನಃ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಆಯ್ಕೆ ಮಾಡುವುದರಲ್ಲಿ ಅರ್ಥವಿದೆಯೇ’ ಎಂದು ಕೇಳಿದರು.

ಮುಖಂಡರಾದಕೊಟ್ರೇಶ್‌, ಧರ್ಮಾ ನಾಯ್ಕ, ರಾಮ ನಾಯ್ಕ, ಸಂಜೀವಪ್ಪ, ಯರ್ರಿಸ್ವಾಮಿ, ತಾಯಪ್ಪ, ಅರ್ಜುನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.