ADVERTISEMENT

’ಜಿಂದಾಲ್‌ ಈಸ್ಟ್‌ ಇಂಡಿಯಾ ಕಂಪೆನಿ ಇದ್ದಂತೆ‘

ಜಮೀನು ಪರಭಾರೆ ವಿರೋಧಿಸಿ ಜಿಂದಾಲ್‌ನಿಂದ ಬೆಂಗಳೂರಿಗೆ ಶಾಸಕ ಆನಂದ್‌ ಸಿಂಗ್‌ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 13:51 IST
Last Updated 15 ಜೂನ್ 2019, 13:51 IST

ಹೊಸಪೇಟೆ: ’ಜಿಂದಾಲ್‌, ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯಂತಿದೆ. ಸ್ಥಳೀಯರನ್ನು ಗುಲಾಮರಾಗಿಸಿಕೊಂಡು ದುಡಿಸಿಕೊಳ್ಳುತ್ತಿದೆ. ಆ ಕಂಪೆನಿಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅಂತಹ ಕಂಪೆನಿಗೆ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಜಮೀನು ಮಾರಾಟ ಮಾಡಬಾರದು‘ ಎಂದು ಶಾಸಕ ಆನಂದ್‌ ಸಿಂಗ್‌ ಆಗ್ರಹಿಸಿದರು.

ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರೊಂದಿಗೆ ನಡೆದ ಹೊಡೆದಾಟ ಪ್ರಕರಣದ ಬಳಿಕ ಮೊದಲ ಬಾರಿಗೆ ಶನಿವಾರ ಸಂಜೆ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿ ಮಾತನಾಡಿದರು.

’ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಜಿಂದಾಲ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುತ್ತೇನೆ. ನನ್ನ ಜಿಲ್ಲೆಯ ಜನರ ಹಿತಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ನನ್ನ ಪಕ್ಷದವರು ನನ್ನನ್ನು ಬೆಂಬಲಿಸಲಿ ಬಿಡಲಿ, ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಈಗಾಗಲೇ ಅನೇಕ ಸಂಘ ಸಂಸ್ಥೆಗಳ ಮುಖಂಡರು ನನ್ನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ‘ ಎಂದು ಮಾಹಿತಿ ನೀಡಿದರು.

ADVERTISEMENT

’ಜಿಂದಾಲ್‌ಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಕೊಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಬೆಂಗಳೂರಿನಲ್ಲಿ ಕಾರ್ಖಾನೆ ಆರಂಭಿಸುವುದಾಗಿ ಜಮೀನು ಪಡೆದುಕೊಂಡಿದ್ದ ಜಿಂದಾಲ್‌ ಅಲ್ಲಿ ರಿಯಲ್‌ ಎಸ್ಟೇಟ್‌ ಮಾಡುತ್ತಿದೆ. ಒಂದುವೇಳೆ ತೋರಣಗಲ್‌ ಬಳಿ ಜಮೀನು ಕೊಟ್ಟರೆ ಅಲ್ಲೂ ಕೂಡ ಅದೇ ಮಾಡುವ ಸಾಧ್ಯತೆ ಇದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.