ADVERTISEMENT

ಕೂಡ್ಲಿಗಿ: ಹಳ್ಳಿಗಳಲ್ಲಿ ಈಗ ಜೋಕುಮಾರನ ಹಾಡು!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 12:51 IST
Last Updated 22 ಸೆಪ್ಟೆಂಬರ್ 2018, 12:51 IST
ಕೂಡ್ಲಿಗಿಯ ಅಂಗಡಿಯೊಂದರ ಮುಂದೆ ಜೋಕಪ್ಪನ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಹಾಡು ಹಾಡುತ್ತಿರುವ ಬಸಮ್ಮ, ರತ್ನಮ್ಮ, ಗೌರಮ್ಮ,
ಕೂಡ್ಲಿಗಿಯ ಅಂಗಡಿಯೊಂದರ ಮುಂದೆ ಜೋಕಪ್ಪನ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಹಾಡು ಹಾಡುತ್ತಿರುವ ಬಸಮ್ಮ, ರತ್ನಮ್ಮ, ಗೌರಮ್ಮ,   

ಕೂಡ್ಲಿಗಿ: ಬರಗಾಲದ ನಡುವೆ ತಾಲ್ಲೂಕಿನ ಹಳ್ಳಿಗಳಲ್ಲಿ ಮನೆಮನೆಗೆ ಜೋಕುಮಾರನ ಆಗಮನವಾಗಿದೆ.

ಅಗಲ ಮುಖ, ದೊಡ್ಡ ಕಣ್ಣು, ಹುರಿ ಮೀಸೆ, ತೆರೆದ ಬಾಯಿ, ಹಣೆಗೆ ವಿಭೂತಿ, ಕುಂಕು­ಮದ ಪಟ್ಟೆಗಳು, ಕೈಯಲ್ಲಿ ಸಣ್ಣ ಕತ್ತಿ ಹಿಡಿದ ಮಣ್ಣಿನ ಜೋಕುಮಾರ ಜನರ ಬಾಯಲ್ಲಿ ಜೋಕಪ್ಪ. ಆತನ ಮೂರ್ತಿಯನ್ನು ದೊಡ್ಡ ಬಿದಿರು ಬುಟ್ಟಿಯಲ್ಲಿ ಬೇವಿನ ಸೊಪ್ಪಿನ ನಡುವೆ ಇಟ್ಟುಕೊಂಡು ಬರುವ ಮಹಿಳೆಯರ ಹಾಡು ಸಂಭ್ರಮವನ್ನು ಕುರಿತು ಹೇಳುತ್ತವೆ. ರೈತರ ಬದುಕು ಹಸನಾಗಲಿ ಎಂಬುದೇ ಹಾಡುಗಳ ಆಶಯ ಎಂಬುದೇ ವಿಶೇಷ.

‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರಿ ತುಂಬಿ ಗೊಡ್ಡುಗಳೆಲ್ಲ ಹೈನಾಗೆ ಜೋಕುಮಾರ'ಎಂದು ಸುಶ್ರಾವ್ಯವಾಗಿ ಹಾಡುತ್ತ ಮನೆ ಮನೆಗೆ ಬರುವ ಮಹಿಳೆಯರು ಹೊಸ ತಲೆಮಾರಿನವರಲ್ಲಿ ಅಚ್ಚರಿ ಮೂಡಿಸುತ್ತಾರೆ.

ADVERTISEMENT

ಜೋಕುಮಾರನನ್ನು ಹೊತ್ತು ಬರುವುದರಿಂದ ಮಹಿಳೆಯರಿಗೆ ಸಿಗುವ ಆದಾಯ ಅಷ್ಟಕ್ಕಷ್ಟೇ. ಆದರೆ ಉತ್ಸಾಹಕ್ಕೆ ಮಾತ್ರ ಬರಗಾಲವಿಲ್ಲ.

ಗಣಪ ಹುಟ್ಟಿದ ಐದನೇ ದಿನಕ್ಕೆ ಹುಟ್ಟುತ್ತಾನೆ ಎನ್ನಲಾಗುವ ಜೋಕುಮಾರನ ಆಚರಣೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದೂ ನಿಜ. ಜೊಕುಮಾರನ ಹಬ್ಬದ ಆಚರಣೆಯಿಂದ ರೈತರ ಬದುಕು ಹಸನಾಗಲಿ ಎಂದು ಹಾಡುವವರ ಬದುಕು ಸಂಭ್ರಮ ಪಡುವಷ್ಟೇನೂ ಹಸನಾಗಿಲ್ಲ.

ಗಂಗಾಮತಸ್ಥರ ಮನೆಯಲ್ಲಿ ಹುಟ್ಟುವ ಜೋಕುಮಾರನನ್ನು, ಅ ಮನೆತನದ ಪುರುಷರೊಂದಿಗೆ ಮಹಿಳೆಯರು ಹೊತ್ತು ಮನೆ ಮನೆಗೆ ತೆರಳುತ್ತಾರೆ. ಈ ಆಚರಣೆಗೆಂದೇ ನಿಗದಿತ ಹಾಗೂ ಸಿಮೀತವಾದ ಕುಟುಂಬಗಳಿವೆ.

‘ಹಲವು ವರ್ಷಗಳ ಹಿಂದೆ ಏಳು ದಿನ ಕಾಲ ಜೋಕುಮಾರ ಸ್ವಾಮಿಯನ್ನು ಹೊತ್ತು ಮನೆ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಜೋಳ, ಅಕ್ಕಿ, ಗೋದಿ, ಒಣ ಮೆಣಸಿನಕಾಯಿ, ಕಾಸು ದೊರೆಯುತ್ತಿತ್ತು. ಜೋಕುಮಾರನ ಬಾಯಿ ತುಂಬ ಬೆಣ್ಣೆ ಇರುತ್ತಿತ್ತು’ ಎಂದು ಬಸಮ್ಮ ರತ್ನಮ್ಮ ಚೌಡಪ್ಪ ಸ್ಮರಿಸಿಕೊಂಡರು.

‘ಆದರೆ ಈಗ ಸಮರ್ಪಕ ಮಳೆಯೂ ಇಲ್ಲ, ಜನರ ಬಳಿ ಜಾನುವಾರುಗಳು ಕಡಿಮೆಯಾಗಿವೆ. ಹೀಗಾಗಿ ಉದಾರವಾಗಿ ದಾನ ಕೊಡುವವರೂ ಕಡಿಮೆ. ಜೋಕುಮಾರ ಸ್ವಾಮಿಯನ್ನು ಹೊತ್ತು ತಿರುಗುವವರೂ ಕಡಿಮೆಯಾಗಿದ್ದಾರೆ. ನಾವಂತೂ ಹೊತ್ತು ತಿರುಗುತ್ತೇವೆ’ ಎಂದು ಹೇಳಿದರು.

‘ದೊಡ್ಡವರು ಮಾಡಿಕೊಂಡು ಬಂದಿದ್ದಾರೆ ಎಂದು ನಾವೂ ಮಾಡಿಕೊಂಡು ಹೊರಟಿದ್ದೇವೆ.ನಮ್ಮ ನಂತರ ಯಾರು ಮಾಡುತ್ತಾರೊ ಗೊತ್ತಿಲ್ಲ’ ಎಂಬುದು ಜೋಕಪ್ಪನನ್ನು ಹೊತ್ತು ತಿರುಗುವ ಬಾರಿಕರ ಗೋಪಿ ಹಾಗೂ ಹುಲಿಗೆಮ್ಮ ಅವರ ನುಡಿ.

ಆಚರಣೆ ಹೀಗೆ.....
ಜೋಕುಮಾರನ ಕುರಿತು ಹಾಡು ಹೇಳುವವರು ಮೊಟ್ಟ ಮೊದಲು ಗ್ರಾಮದ ಗೌಡರು ಇಲ್ಲವೆ ಶಾನಭೋಗರ ಹಾಗೂ ಆಯಾಗಾರರ ಮನೆ­ಗಳಿಗೆ ಭೇಟಿ ನೀಡುತ್ತಾರೆ. ನಂತರ 7 ದಿನ ಊರಿನ ವಿವಿಧ ಮನೆಗಳಿಗೆ ಸುತ್ತುತ್ತಾರೆ. ನಂತರ ಹುಣ್ಣಿಮೆಯ ದಿನ ಅಂದರೆ ಏಳನೇ ದಿನಕ್ಕೆ ಪರಿಶಿಷ್ಟರ ಕೇರಿಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಜೋಕಪ್ಪ ಸಾಯುತ್ತಾನೆ. ನಂತರ ಜೋಕಪ್ಪನನ್ನು ಊರ ಹೊರಗೆ ಇರುವ ಅಗಸರು ಬಟ್ಟೆ ಒಗೆಯುವ ಬಂಡೆಯ ಅಡಿಯಲ್ಲಿ ಹಾಕಿ ಬರುತ್ತಾರೆ. ಇದು ಹುಣ್ಣಿಮೆಯಂದು ನಡೆಯುವುದರಿಂದ ಜೋಕುಮಾರ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಸಂಚಾರದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುತ್ತಾರೆ. ಜೋಕುಮಾರಸ್ವಾಮಿ ಈಗ ತಾಲ್ಲೂಕಿನ ಮನೆ ಮನೆಗಳಿಗೆ ಸಂಚಾರ ಹೊರಟಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.