ತೆಕ್ಕಲಕೋಟೆ: ಪಟ್ಟಣದ ಇತಿಹಾಸ ಪ್ರಸಿದ್ಧ ಪವಾಡ ಪುರುಷ, ಶರಣ ಕಾಡಸಿದ್ದೇಶ್ವರ ಸ್ವಾಮಿ ಜಾತ್ರಾ -ಮಹೋತ್ಸವ ಚಾಂದ್ರಮಾನ ಯುಗಾದಿ ಮಾರ್ಚ್ 30 ರಂದು ಜರುಗಲಿದೆ.
ಮೂರು ದಿನಗಳ ಕಾಲ ನಡೆಯುವ -ಜಾತ್ರಾ ಮಹೋತ್ಸವದಲ್ಲಿ, ಪ್ರತಿ ವರ್ಷ ಅಮವಾಸ್ಯೆ ಮರುದಿನ ಅಂದರೆ ಚಾಂದ್ರಮಾನ ಯುಗಾದಿಯ ದಿನದಂದು ರಥೋತ್ಸವ ನಡೆಯುತ್ತದೆ. ಮರುದಿನ 'ಕಡುಬಿನ ಕಾಳಗ' ಹಾಗೂ ಮಾರನೆ ದಿನ ಬಣ್ಣ ಎರಚಿ ಹೋಲಿ ಆಚರಿಸುವುದು ಇಲ್ಲಿನ ವಿಶೇಷ.
ದೇವಸ್ಥಾನದ ಅಲಂಕಾರ, ರಥ ನಿರ್ಮಾಣ ಸೇರಿದಂತೆ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಸಂಬಂಧಿಸಿದ ಕಾರ್ಯಗಳು ಪೂರ್ಣಗೊಂಡಿದ್ದು, ಪಟ್ಟಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಕರ್ನಾಟಕದ ಕಾಡಸಿದ್ಧ ಪರಂಪರೆ ತುಂಬಾ ಪುರಾತನವಾದುದು. ಈ ಪರಂಪರೆಯ ಆದಿಗುರು ಕಾಡಸಿದ್ದರು 775 ವರ್ಷಗಳ ಕಾಲ ಬದುಕಿದ್ದರು ಎಂಬ ಪ್ರತೀತಿ ಇದೆ. ತೆಕ್ಕಲಕೋಟೆಯ ಸಂತ ಕಾಡಸಿದ್ದೇಶ್ವರ ಬಳ್ಳಾರಿ ಸೀಮೆಯ ಜನ ಸಮುದಾಯಗಳಲ್ಲಿ ಬೇರು ಬಿಟ್ಟ ಅವಧೂತರಾಗಿದ್ದಾರೆ. ಇವರ ಜೀವಿತ ಕಾಲ 18-19ನೇ ಶತಮಾನ ಎಂದು ಗುರುತಿಸಲಾಗಿದೆ. ಇಲ್ಲಿ ಕಾಡಸಿದ್ಧೇಶ್ವರರ ಗದ್ದುಗೆ ಇದ್ದು ಅವರು ಬಳಸುತ್ತಿದ್ದರು ಎನ್ನಲಾದ ಪಾದುಕೆ, ನಿಲುವಂಗಿ, ಖಡ್ಗ ಮುಂತಾದ ವಸ್ತುಗಳಿವೆ. ಸುಮಾರು 200 ವರ್ಷಗಳಿಂದ ಪಾಡ್ಯಮಿಯಂದು ಯುಗಾದಿ ರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
ಭಾವೈಕ್ಯದ ರಥೋತ್ಸವ: ಸೂಫಿ ಸಂತ ಕೌತಾಳದ ಖಾದರಲಿಂಗ ಹಾಗೂ ಪವಾಡ ಪುರುಷ ಕಾಡಸಿದ್ದ ಇವರ ಮುಖಾಮುಖಿ ಪವಾಡಗಳು ಜನಜನಿತವಾಗಿವೆ. ಹುಲಿಯ ಮೇಲೆ ಕುಳಿತು ಕಾಡಸಿದ್ದನ ಭೇಟಿಗೆ ಬರುವ ಸಂತ ಖಾದರಲಿಂಗನಿಗೆ ಎದುರಾಗಿ ಕಾಡಸಿದ್ದೇಶ್ವರರು ತಾನು ಕುಳಿತ ಕಟ್ಟೆಯನ್ನೇ ನಡೆಸಿಕೊಂಡು ಹೋಗುವ ಪವಾಡ ತೋರಿಸುತ್ತಾರೆ. ಇವರ ಗುರುಶಿಷ್ಯತ್ವದ ಇಲ್ಲವೆ ಗೆಳೆತನದ ದ್ಯೋತಕವಾಗಿ ಜಾತ್ರೆಯ ಸಂದರ್ಭದಲ್ಲಿ ಸರ್ವಧರ್ಮಿಯರಿಗೆ 'ತೆಂಗಿನಕಾಯಿ ಬಾಬು' ನೀಡಿ ಗೌರವಿಸುವ ಪದ್ದತಿ ಇಂದಿಗೂ ಇದೆ. ಸರ್ವಧರ್ಮಿಯರು ರಥಕ್ಕೆ 5 ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಿ ಭಾವೈಕ್ಯತೆ ಮೆರೆಯುತ್ತಾರೆ.
ಜನರು ತಂಡೋಪತಂಡವಾಗಿ ಜಾತ್ರೆಗೆ ಬರುತ್ತಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಜಾತಿ ಧರ್ಮಗಳ ಬೇಧ ಭಾವ ಇಲ್ಲದೆ ಸರ್ವಧರ್ಮೀಯರೂ ಭಾಗವಹಿಸುವ ಕೋಮು ಸೌಹಾರ್ದ ಸಾರುವ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳುವುದೇ ವಿಶೇಷನರೇಂದ್ರ ಸಿಂಹ ಕಾಂಗ್ರೆಸ್ ಮುಖಂಡ ತೆಕ್ಕಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.