ADVERTISEMENT

ಹೊಸಪೇಟೆ: ‘ಕಲ್ಯಾಣ ಕರ್ನಾಟಕದ ಉನ್ನತಿಗೆ 371(ಜೆ) ಕಾರಣ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 8:25 IST
Last Updated 17 ಸೆಪ್ಟೆಂಬರ್ 2020, 8:25 IST
ಹೊಸಪೇಟೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ಅವರು ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಗೌರವ ಸೂಚಿಸಿದರು
ಹೊಸಪೇಟೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ಅವರು ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಗೌರವ ಸೂಚಿಸಿದರು   

ಹೊಸಪೇಟೆ: ‘ಸಂವಿಧಾನದ 371(ಜೆ)ಯಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದ್ದರಿಂದ ಜನ ಮೇಲೆ ಬರಲು ಸಾಧ್ಯವಾಗಿದೆ. ಇದರಿಂದಾಗಿ ಇಡೀ ಕಲ್ಯಾಣ ಕರ್ನಾಟಕ ಉನ್ನತಿ ಸಾಧಿಸುತ್ತಿದೆ’ ಎಂದು ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಗುರುವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಪ್ರಗತಿಯತ್ತ ಈಗಷ್ಟೇ ಮುಖ ಮಾಡಿದೆ. ಇನ್ನೂ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ. ಈ ಮುಂಚೆ ಹೈದರಾಬಾದ್‌ ಕರ್ನಾಟಕವೆಂದು ಈ ಪ್ರದೇಶಕ್ಕೆ ಕರೆಯಲಾಗುತ್ತಿತ್ತು. ಹೋದ ವರ್ಷ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದೆ. ಹೆಸರಿಗೆ ತಕ್ಕಂತೆ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದರು.

ADVERTISEMENT

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ‘ಸರ್ದಾರ್ ವಲ್ಲಭಬಾಯಿ ಪಟೇಲರು 500 ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿದ್ದರು, ಆದರೆ, ಹೈದರಾಬಾದ್ ನಿಜಾಮರು ಮಾತ್ರ ವಿಲೀನಕ್ಕೆ ನಿರಾಕರಿಸಿದ್ದರು. ಆಗ ಮಿಲಿಟರಿ ಕಾರ್ಯಾಚರಣೆ ನಡೆಸಿ, ನಿಜಾಮರ ಆಡಳಿತ ಕೊನೆಗೊಳಿಸಿದರು’ ಎಂದು ನೆನೆದರು.

ತಹಶೀಲ್ದಾರ್‌ ಎಚ್.ವಿಶ್ವನಾಥ್, ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಕೆ. ಶ್ರೀಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಕಿಶೋರ್ ಕುಮಾರ್, ಶಿರಸ್ತೇದಾರರಾದ ಶ್ರೀಧರ್, ಆಹಾರ ಇಲಾಖೆಯ ಮಂಜುನಾಥ್ ಇದ್ದರು.

ಸರಳ ವಿಶ್ವಕರ್ಮ ಜಯಂತಿ:

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಹೊಸಪೇಟೆ ತಾಲ್ಲೂಕು ಕಚೇರಿಯಲ್ಲಿ ಗುರುವಾರ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶೇಕ್‌ ತನ್ವೀರ್‌ ಆಸಿಫ್‌ ಅವರು ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.