ADVERTISEMENT

ಕಾಲುವೆ ನೀರಿಗಾಗಿ ಕಂಪ್ಲಿ ಬಂದ್: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:34 IST
Last Updated 4 ನವೆಂಬರ್ 2025, 5:34 IST
ಕಂಪ್ಲಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು 2ನೇ ಬೆಳೆಗೆ ಕಾಲುವೆಗೆ ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣದ  ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಕಂಪ್ಲಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು 2ನೇ ಬೆಳೆಗೆ ಕಾಲುವೆಗೆ ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣದ  ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಕಂಪ್ಲಿ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್.ಎಲ್.ಸಿ) 2ನೇ ಬೆಳೆ ಬೆಳೆಯಲು ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಪಟ್ಟಣ ಬಂದ್ ನಡೆಯಿತು.

ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಕೆಲ ಹೊತ್ತು ಸಂಚಾರ ವ್ಯತ್ಯಯವಾಗಿತ್ತು.

ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ರೈತರು ಸಲ್ಲಿಸಿದರು.

ADVERTISEMENT

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಜಲಾಶಯದಲ್ಲಿ 80ಟಿಎಂಸಿ ನೀರು ಸಂಗ್ರಹವಿದ್ದು, 2ನೇ ಬೆಳೆಗೆ ಕಾಲುವೆಗಳಿಗೆ ನೀರು ಪೂರೈಸುವ ಕುರಿತಂತೆ ಕೂಡಲೇ ಮುನಿರಾಬಾದಿನಲ್ಲಿ ಐಸಿಸಿ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಮುಂಗಾರಿನಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಭತ್ತಕ್ಕೆ ಹಾನಿಯಾಗಿದೆ. ಇಳುವರಿಯೂ ಕುಸಿದಿದೆ. ಈ ಕಾರಣದಿಂದ 2ನೇ ಬೆಳೆಗೆ ನೀರು ಅಗತ್ಯವಿದೆ. ಇಲ್ಲವಾದಲ್ಲಿ ರೈತ ಕುಟುಂಬಗಳು ವಲಸೆ ಹೋಗಬೇಕಾದ ಅನಿವಾರ್ಯತೆ ತಲೆದೋರುತ್ತದೆ ಎಂದು ಕೆಲ ರೈತರು ಅಳಲು ತೋಡಿಕೊಂಡರು.

ನೀರಾವರಿ ತಜ್ಞರ ಸಲಹೆ ಪಡೆದು ಡ್ಯಾಂ ಹೊಸ ಕ್ರಸ್ಟ್ ಗೇಟ್‍ಗಳನ್ನು ಅಳವಡಿಸಬೇಕು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮೂರು ರಾಜ್ಯದಲ್ಲದವರನ್ನು ಟಿ.ಬಿ ಬೋರ್ಡ್ ಕಾರ್ಯದರ್ಶಿಯನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.

ರೈತ ಪ್ರಮುಖರಾದ ಜೆ. ಭರಮರೆಡ್ಡಿ, ಕೆ. ವೀರೇಶ, ತಿಮ್ಮಪ್ಪನಾಯಕ, ಕೆ. ರಮೇಶ, ಡಿ. ಮುರಾರಿ, ಟಿ. ಗಂಗಣ್ಣ, ವಿ.ಟಿ. ರಾಜು, ಕುರಿ ಮಂಜುನಾಥ, ಕೆ.ಎಂ. ಹೇಮಯ್ಯಸ್ವಾಮಿ, ಎ.ಸಿ. ದಾನಪ್ಪ, ಅಳ್ಳಳ್ಳಿ ವೀರೇಶ್, ಎಂ. ಸುಧೀರ್, ಇಟಗಿ ಬಸವರಾಜಗೌಡ, ಡಿ. ಶ್ರೀಧರಶೆಟ್ಟಿ, ಪಿ. ನಾರಾಯಣರೆಡ್ಡಿ, ಕಡೇಮನಿ ಪಂಪಾಪತಿ, ಡಿ.ವಿ. ಸುಬ್ಬಾರಾವ್, ಬಿ. ಸದಾಶಿವಪ್ಪ, ಸಿ.ಡಿ. ಮಹಾದೇವ, ಡಿ. ಮುನಿಸ್ವಾಮಿ, ಟಿ. ಬದ್ರಿನಾಥ, ವೆಂಕಟರಾಮರಾಜು, ಬಿ. ಅಂಬಣ್ಣ, ವಾಲಿ ಕೊಟ್ರಪ್ಪ, ಮಾಧವರೆಡ್ಡಿ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.