ADVERTISEMENT

ಕಂಪ್ಲಿಯಲ್ಲಿ ಪಾಳುಬಿದ್ದ ತಂಗುದಾಣಗಳು: ನಗರೋತ್ಥಾನ, ಸಂಸದರ ಅನುದಾನ ವ್ಯರ್ಥ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 27 ಅಕ್ಟೋಬರ್ 2025, 4:47 IST
Last Updated 27 ಅಕ್ಟೋಬರ್ 2025, 4:47 IST
ಕಂಪ್ಲಿ ಡಾ. ಅಂಬೇಡ್ಕರ್ ವೃತ್ತದ ಬಳಿ ಹೊಸಪೇಟೆಗೆ ತೆರಳುವ ಪ್ರಯಾಣಿಕರು ರಸ್ತೆ ಮೇಲೆ ನಿಂತು ಬಸ್‍ಗಳಿಗಾಗಿ ಕಾಯುತ್ತಿರುವ ದೃಶ್ಯ 
ಕಂಪ್ಲಿ ಡಾ. ಅಂಬೇಡ್ಕರ್ ವೃತ್ತದ ಬಳಿ ಹೊಸಪೇಟೆಗೆ ತೆರಳುವ ಪ್ರಯಾಣಿಕರು ರಸ್ತೆ ಮೇಲೆ ನಿಂತು ಬಸ್‍ಗಳಿಗಾಗಿ ಕಾಯುತ್ತಿರುವ ದೃಶ್ಯ    

ಕಂಪ್ಲಿ: ಪಟ್ಟಣದ ಅನಗತ್ಯ ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಿಸಿದ್ದು, ಅಗತ್ಯವಿರುವ ಕಡೆ ನಿರ್ಲಕ್ಷಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಮಳೆ, ಬಿಸಿಲಿನಲ್ಲಿ ಇಂದಿಗೂ ಪ್ರಯಾಸಪಡುವಂತಾಗಿದೆ.

ಕಂಪ್ಲಿ ಡಾ. ಅಂಬೇಡ್ಕರ್ ವೃತ್ತದ ಬಳಿ ಹೊಸಪೇಟೆಗೆ ತೆರಳುವ ಪ್ರಯಾಣಿಕರು ರಸ್ತೆ ಮೇಲೆ ನಿಂತು ಬಸ್‍ಗಳಿಗಾಗಿ ಕಾಯುತ್ತಿರುವ ದೃಶ್ಯ 

ಪಟ್ಟಣದ ಏಳು ಕಡೆ ಪುರಸಭೆ ನಗರೋತ್ಥಾನ ಯೋಜನೆ, ಸಂಸದರ ಅನುದಾನದಡಿ ನಿರ್ಮಿಸಿರುವ ತಂಗುದಾಣಗಳು ನಿರುಪಯುಕ್ತವಾಗಿ ಹಾಳು ಬಿದ್ದಿವೆ. ಒಂದೆರೆಡು ನಿರ್ವಹಣೆ ಇಲ್ಲದೆ ಮೂಲೆಗುಂಪಾಗಿವೆ. ಹೀಗಾಗಿ ಅನುದಾನದ ಅಪವ್ಯಯವಾಗಿದೆ ಎನ್ನುವ ದೂರು ನಾಗರಿಕರಿಂದ ವ್ಯಕ್ತವಾಗುತ್ತಿದೆ.

ಜನನಿಬಿಡ ಪ್ರದೇಶವಾದ ಡಾ. ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕೇಂದ್ರ ಹೊಸಪೇಟೆ (ವಿಜಯನಗರ) ಕಡೆ ತೆರಳುವ ಪ್ರಯಾಣಿಕರಿಗೆ ಮತ್ತು ತಾಲ್ಲೂಕು ಕೇಂದ್ರ ಸಿರುಗುಪ್ಪ ಮತ್ತು ಕುರುಗೋಡು ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಇಂದಿಗೂ ತಂಗುದಾಣವಿಲ್ಲ. ಅದರಿಂದ ರಸ್ತೆ ಪಕ್ಕದಲ್ಲಿಯೇ ಬಸ್‍ಗಳಿಗಾಗಿ ಗಂಟೆಗಟ್ಟಲೆ ಬಯಲಿನಲ್ಲಿಯೇ ಕಾಯುವುದು ಸಾಮಾನ್ಯವಾಗಿದೆ. ಮಳೆಬಂದಾಗ ಈ ಎರಡು ಸ್ಥಳದಲ್ಲಿ ನಿಲ್ಲುವ ಪ್ರಯಾಣಿಕರ ಪಾಡು, ಗೋಳಾಟ ಹೇಳತೀರದು.

ADVERTISEMENT
ಕಂಪ್ಲಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಜೈನ್ ಸೇವಾ ಟ್ರಸ್ಟ್ನವರು ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನಿರ್ಮಿಸಿರುವ ತಂಗುದಾಣ

ಹಳೆ ಬಸ್ ನಿಲ್ದಾಣದ ಒಂದು ಭಾಗದಲ್ಲಿ ಕುರುಗೋಡು, ಸಿರುಗುಪ್ಪ ಪ್ರಯಾಣಿಕರು ನಿಲ್ಲುವುದರಿಂದ ಹಿಂಭಾಗದಲ್ಲಿರುವ ಅಂಗಡಿ ಮಾಲೀಕರು ತಮಗೆ ವ್ಯಾಪಾರವಾಗುವುದಿಲ್ಲ ಮುಂದೆ ಹೋಗಿ ಎಂದು ಗದರುತ್ತಾರೆ. ಅದರಿಂದ ಪ್ರಯಾಣಿಕರು ಹಿಡಿಶಾಪ ಹಾಕುತ್ತಾ ಪಕ್ಕಕ್ಕೆ ಸರಿದು ರಸ್ತೆಗೆ ಹೊಂದಿಕೊಂಡಂತೆ ಅನಿವಾರ್ಯವಾಗಿ ನಿಂತು ಬಸ್‍ಗಳಿಗಾಗಿ ನಿರೀಕ್ಷಿಸುತ್ತಾರೆ.

ಸದ್ಯ ಹಳೆ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಪುರಸಭೆ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಮಿನಿ ಬಸ್ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಆದರೆ, ಅಲ್ಲಿಯವರೆಗೆ ಪ್ರಯಾಣಿಕರ ವ್ಯಥೆ ಕೇಳುವವರಿಲ್ಲ ಎನ್ನುವಂತಾಗಿದೆ.

ಕಂಪ್ಲಿ ಹಳೆ ಬಸ್ ನಿಲ್ದಾಣದಲ್ಲಿ ತೆರವುಗೊಳ್ಳಲಿರುವ ಪುರಸಭೆ ವಾಣಿಜ್ಯ ವಾಣಿಜ್ಯ ಮಳಿಗೆಗಳು 
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ತಂಗುದಾಣದಲ್ಲಿ ಕುಳಿಕೊಳ್ಳುವ ಆಸನ ಹಾಳಾಗಿದ್ದು ನಿಲ್ದಾಣದಲ್ಲಿ ನಾಯಿಗಳು ವಿಶ್ರಾಂತಿ ಪಡೆಯುತ್ತಿರುವ ದೃಶ್ಯ
ಪಟ್ಟಣದ ಹೃದಯ ಭಾಗದ ಪುರಸಭೆಗೆ ಸೇರಿದ ಹಳೆ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ₹ 2ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಿನಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಸದ್ಯ ಹಳೆ ಬಸ್ ನಿಲ್ದಾಣದ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮುಕ್ತಾಯದ ಬಳಿಕ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.
ಜೆ.ಎನ್. ಗಣೇಶ್ ಕಂಪ್ಲಿ ಶಾಸಕ
ಈಗಾಗಲೇ ಪಟ್ಟಣದಲ್ಲಿ ಕಲ್ಮಠ ಶ್ರೀಗಳು ಮುದ್ದಾಪುರ ರಸ್ತೆಯಲ್ಲಿ ದಾನವಾಗಿ ನೀಡಿದ ಸ್ಥಳದಲ್ಲಿ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣವಿದೆ. ಪುರಸಭೆಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುವ ಸುಮಾರು 18 ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಮತ್ತೊಂದು ಮಿನಿ ಬಸ್ ನಿಲ್ದಾಣ ನಿರ್ಮಿಸುವ ಅಗತ್ಯವಿಲ್ಲ. ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧಿಸಿದ್ದೇನೆ.
ವಿ.ಎಲ್. ಬಾಬು ಪುರಸಭೆ ಸದಸ್ಯ
ತಂಗುದಾಣ ನಿರ್ಮಾಣ ಡಾ. ಅಂಬೇಡ್ಕರ್ ವೃತ್ತದ (ಹೊಸಪೇಟೆ ಮಾರ್ಗ) ಸಮೀಪ ಇಲ್ಲವೇ ಸಮುದಾಯ ಆರೋಗ್ಯ ಕೇಂದ್ರದ (ಸಿರುಗುಪ್ಪ ಮಾರ್ಗ) ಹತ್ತಿರ ಪುರಸಭೆಯವರು ಸ್ಥಳ ನೀಡಿದಲ್ಲಿ ಉಚಿತವಾಗಿ ತಂಗುದಾಣ ನಿರ್ಮಿಸಿಕೊಡಲಾಗುವುದು.
ರಾಜು ಜೈನ್ ಜೈನ್ ಸೇವಾ ಟ್ರಸ್ಟ್ ಕಂಪ್ಲಿ.
ಕಂಪ್ಲಿಯ ಸಣಾಪುರ ರಸ್ತೆಯಲ್ಲಿ ಸಿರುಗುಪ್ಪ ಸೇರಿದಂತೆ ಹಲವು ಹಳ್ಳಿಗಳ ಜನರು ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್‍ಗಾಗಿ ನಿತ್ಯ ರಸ್ತೆ ಬದಿ ನಿಲ್ಲುತ್ತಾರೆ. ಈ ಸ್ಥಳದಲ್ಲಿ ಜರೂರು ತಂಗುದಾಣದ ಅಗತ್ಯವಿದೆ.
ಸಿ. ಯಂಕಪ್ಪ ವಕೀಲ ಸಣಾಪುರ ಗ್ರಾಮ

ನಿರ್ವಹಣೆ ಇಲ್ಲದೆ ತಬ್ಬಲಿಯಾದ ತಂಗುದಾಣಗಳು

ಜೋಗಿ ಕಾಲುವೆ ಎಪಿಎಂಸಿ ಕಂಪ್ಲಿ ಕೋಟೆ ತುಂಗಭದ್ರಾ ನದಿ ದಂಡೆಯಲ್ಲಿ ದೂರದೃಷ್ಟಿಯ ಕೊರತೆಯಿಂದ ನಿರ್ಧಿಷ್ಟ ಸ್ಥಳ ಗುರುತಿಸದೆ ಅವೈಜ್ಞಾನಿಕವಾಗಿ ತಂಗುದಾಣ ನಿರ್ಮಿಸಲಾಗಿದೆ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಬಿರದಿನ್ನಿ ಬಳಿ ನಿರ್ಮಿಸಿರುವ ತಂಗುದಾಣಗಳು ದುರವಸ್ಥೆಯಲ್ಲಿವೆ.

ಟ್ರಸ್ಟ್ ದಾನಿಗಳಿಂದ ತಂಗುದಾಣ ನಿರ್ಮಾಣ

ಪಟ್ಟಣದ ಜನನಿಬಿಡ ಸ್ಥಳ ಡಾ. ಅಂಬೇಡ್ಕರ್ ವೃತ್ತದಲ್ಲಿ ಜೈನ್ ಸೇವಾ ಟ್ರಸ್ಟ್‌ ₹ 2.50ಲಕ್ಷ ವೆಚ್ಚದಲ್ಲಿ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ತಂಗುದಾಣ ನಿರ್ಮಿಸಿದೆ. ಅದರಿಂದ ಗಂಗಾವತಿ ವಿಜಯಪುರ ಬಾಗಲಕೋಟೆ ಬಾದಾಮಿ ಸಿಂಧನೂರು ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಆಂಧ್ರ ತೆಲಂಗಾಣ ಭಾಗಕ್ಕೆ ತೆರಳುವವರಿಗೆ ಅನುಕೂಲವಾಗಿದೆ. ಅದೇ ರೀತಿ ಗಜ್ಜಲ ದಿನಮಣಿ ಭಕ್ತವತ್ಸಲಂ ಸ್ಮರಣಾರ್ಥ ಗಜ್ಜಲ ಕುಟುಂಬದವರು ಸುಸಜ್ಜಿತ ತಂಗದಾಣ ನಿರ್ಮಿಸಿದ್ದಾರೆ. ಅದರಿಂದ ಜಿಲ್ಲಾ ಕೇಂದ್ರ ಬಳ್ಳಾರಿ ಸೇರಿದಂತೆ ಮೆಟ್ರಿ ದರೋಜಿ ಕುಡುತಿನಿ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ನೆರಳಿನ ವ್ಯವಸ್ಥೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.