ADVERTISEMENT

ನಾಮಫಲಕ ಅಳವಡಿಕೆ ಅವಘಡ: ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:45 IST
Last Updated 23 ಫೆಬ್ರುವರಿ 2026, 7:45 IST
   

ಕಂಪ್ಲಿ: ಇಲ್ಲಿನ ಕೋಟೆ ಪ್ರದೇಶದ ಬಳಿಯ ತುಂಗಭದ್ರಾನದಿ ಸೇತುವೆ ಬಳಿ ಈಚೆಗೆ ಕಬ್ಬಿಣದ ಸ್ವಾಗತ ಕಮಾನು ಫಲಕ ಕ್ರೇನ್ ಮೂಲಕ ಅಳವಡಿಸುವಾಗ ನಡೆದ ಅವಘಡದಲ್ಲಿ ಬಿದ್ದು ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ₹50 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹25 ಲಕ್ಷ ಸರ್ಕಾರ ಪರಿಹಾರ ಘೋಷಿಸುವಂತೆ ಕಂಪ್ಲಿ ವಿಧಾನಸಭಾ ಕ್ಷೇತ್ರ ಬಿಜೆಪಿ ಮತಗಟ್ಟೆ ಮಟ್ಟದ ಏಜೆಂಟ್(ಬಿಎಲ್‍ಎ-1) ಜಿ. ಶ್ರೀನಿವಾಸುಲು ಒತ್ತಾಯಿಸಿದರು.

ಇಲ್ಲಿನ ಮಾಜಿ ಶಾಸಕ ಟಿ.ಎಚ್. ಸುರೇಶ್‍ಬಾಬು ಜನಸಂಪರ್ಕ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾಮಫಲಕ ಅಳವಡಿಕೆಗೆ ಸುರಕ್ಷಿತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಪುರಸಭೆ ಪ್ರಭಾರ ಮುಖ್ಯಾಧಿಕಾರಿ, ಎಂಜಿನಿಯರ್ ಅವರನ್ನು ಅಮಾನತುಗೊಳಿಸುವುದರ ಜತೆಗೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದರು.

‘ನಾಮಫಲಕ ನವೀಕರಣದಲ್ಲಿ ಪುರಸಭೆ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿದ ಅವರು ಪುರಸಭೆಗೆ ಕೆಎಂಎಎಸ್ ದರ್ಜೆಯ ಮುಖ್ಯಾಧಿಕಾರಿಯನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಎನ್. ಮನೋಜಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ಪ್ರಶಾಂತ, ನಗರ ಉಪಾಧ್ಯಕ್ಷ ಎಂ. ಭಾಸ್ಕರ, ನಗರ ಪ್ರಧಾನ ಕಾರ್ಯದರ್ಶಿಗಳಾದ ಕೆ. ಬಸವಪ್ರಭು, ಕಟ್ಟೆ ವಿಶ್ವನಾಥ, ಕಾರ್ಯಕರ್ತರಾದ ಸಿ.ಎ. ಚನ್ನಪ್ಪ, ಶಂಶುದ್ದೀನ್, ಎಚ್.ಎಂ. ವಿರುಪಾಕ್ಷಯ್ಯಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.