
ಕಂಪ್ಲಿ: ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್‍ಗಳ ಅಳವಡಿಕೆ ಕಾರ್ಯ ನಡೆಯುತ್ತಿರುವುದರಿಂದ ಈ ಬಾರಿ ಹಿಂಗಾರು ಭತ್ತ ನಾಟಿಗೆ ನೀರಿಲ್ಲದಂತಾಗಿದೆ. ಈ ಕಾರಣದಿಂದ ಮುಂಗಾರಿನಲ್ಲಿ ಬೆಳೆದ ಭತ್ತದ ಮೇವು, ಸೊಪ್ಪೆಯನ್ನು ರೈತರು ಬಣವೆ ಹಾಕಿ ಜತನದಿಂದ ಕಾಪಾಡಿಕೊಂಡಿರುವುದು ತಾಲ್ಲೂಕಿನ ಎಲ್ಲೆಡೆ ಕಂಡು ಬರುತ್ತಿದೆ.
ಮುಂದಿನ ಹಂಗಾಮು ಬೆಳೆಗಳು ಕೈಸೇರುವವರೆಗೆ ಭತ್ತದ ಒಣ ಮೇವು, ಜೋಳ ಮತ್ತು ಮೆಕ್ಕೆಜೋಳದ ಸೊಪ್ಪೆ(ದಂಟು), ತೊಗರಿ, ಶೇಂಗಾ ಹೊಟ್ಟನ್ನು ರೈತನ ಜೀವನಾಡಿಗಳಾದ ದನಕರುಗಳ ಆಪತ್ಕಾಲದ ಆಹಾರವಾಗಿ ಬಳಕೆ ಮಾಡಲಾಗುತ್ತದೆ.
ತಾಲ್ಲೂಕಿನ ತುಂಗಭದ್ರಾ ಬಲದಂಡೆ ಕೆಳಮಟ್ಟ ಮತ್ತು ಮೇಲ್ಮಟ್ಟ ಕಾಲುವೆ, ತುಂಗಭದ್ರಾ ನದಿ, ವಿಜಯನಗರ ಕಾಲುವೆ, ಕೆರೆ ನೀರಾವರಿ, ಕೊಳವೆಬಾವಿ, ಏತನೀರಾವರಿ ಸೇರಿ ಸುಮಾರು 23,000 ಹೆಕ್ಟೇರ್‌ನಲ್ಲಿ ಬಹುತೇಕ ರೈತರು ವಾಣಿಜ್ಯ ಬೆಳೆಯಾದ ವಿವಿಧ ತಳಿ ಭತ್ತ ನಾಟಿ ಮಾಡಿದ್ದರೆ. ಕೆಲವೇ ರೈತರು ಜೋಳ, ಮುಸುಕಿನಜೋಳ, ತೊಗರಿ ಬೆಳೆದಿದ್ದರು.
ಇದೀಗ ಆ ರೈತರು ಹೊಲ, ಗದ್ದೆ, ಊರ ಹೊರವಲಯದ ಬಯಲಿನಲ್ಲಿ ಆಯತಾ, ತ್ರಿಕೋನಾ, ಚೌಕಾಕಾರ ಮತ್ತು ಪಿರಮಿಡ್ ಆಕಾರಗಳಲ್ಲಿ ಬಣವೆಗಳನ್ನು ನಿರ್ಮಿಸಿ ರಕ್ಷಿಸಿಕೊಂಡಿದ್ದಾರೆ. ಇನ್ನು ಕೆಲವರು ಟಾರ್ಪಲಿನ್ ಹೊದಿಕೆ ಹಾಕಿದ್ದರೆ, ಅಲ್ಲಲ್ಲಿ ಶೆಡ್‍ಗಳಲ್ಲಿಯೂ ಮೇವು ಸಂಗ್ರಹಿಸಿದ್ದಾರೆ.
‘ಪಶುಪಾಲನೆ ಮಾಡುವ ರೈತ ಅಷ್ಟೊಂದು ಶ್ರದ್ಧೆಯಿಂದ ಬಣವೆಯನ್ನು ನಿರ್ಮಿಸಿರುತ್ತಾನೆ. ಆತ ಯಾವ ಎಂಜಿನಿಯರ್‌ಗೂ ಕಡಿಮೆ ಇಲ್ಲ. ತಾನು ಕರಗತ ಮಾಡಿಕೊಂಡಿರುವ ಸಾಂಪ್ರದಾಯಿಕ ಜ್ಞಾನವನ್ನು ಬಳಸಿ ವರ್ಷಾನುಗಟ್ಟಲೇ ಮೇವು ಮತ್ತು ಹೊಟ್ಟನ್ನು ಶೇಖರಿಸಿ ಇಡುತ್ತಾನೆ’ ಎಂದು ಮೆಟ್ರಿ ಗ್ರಾಮದ ಡೈರಿ ಫಾರಂ ಮಾಲೀಕ ಉದ್ಯಾಳು ವೀರನಗೌಡ ವಿವರಿಸಿದರು.
ಮೇವು ಸಂಗ್ರಹಕ್ಕೆ ಶೆಡ್ ನಿರ್ಮಾಣ
ತಾಲ್ಲೂಕಿನ ಮೆಟ್ರಿ-ದೇವಸಮುದ್ರ ಗ್ರಾಮದ ಮಧ್ಯೆ ಇರುವ ಶ್ರೀಕಲ್ಯಾಣಚೌಕಿ ಮಠದ ‘ಕಾಮಧೇನು ಗೋಶಾಲಾ ಸೇವೆ ಟ್ರಸ್ಟ್’ನ ಗೋಶಾಲೆಯ ಜಾನುವಾರುಗಳಿಗೆ ಅಗತ್ಯವಿರುವ ಮೇವು, ಸೊಪ್ಪೆ ಸಂಗ್ರಹಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈಚೆಗೆ ಬೃಹತ್ ಶೆಡ್ ನಿರ್ಮಿಸಲಾಗಿದೆ. ವರ್ಷಪೂರ್ತಿ ಜಾನುವಾರುಗಳಿಗೆ ಆಹಾರ ಅಗತ್ಯವಿರುವುದರಿಂದ ಮಳೆ, ಗಾಳಿಗೆ ಹಾಳಾಗದಂತೆ ಜೋಪಾನ ಮಾಡಲಾಗಿದೆ.– ಕಾಮಧೇನು ಗೋಶಾಲಾ ಸೇವೆ ಟ್ರಸ್ಟ್‍ನ ಕೆ.ಎಂ. ಬಸವರಾಜಶಾಸ್ತ್ರಿ.
120ಎಕರೆ ಮೇವು ಖರೀದಿ
‘ಈ ಬಾರಿ ಬೇಸಿಗೆ ಭತ್ತದ ಬೆಳೆ ಇಲ್ಲದ ಕಾರಣ ಮುಂಬರುವ ದಿನಗಳಲ್ಲಿ ನಮ್ಮ ಫಾರಂನಲ್ಲಿ 40ಆಕಳುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ₹ 4.ಲಕ್ಷ ಭರಿಸಿ 120ಎಕರೆ ಮೇವು ಖರೀದಿಸಿದ್ದೇನೆ– ಚೌಡ್ಕಿ ಸುರೇಶ್, ಮಾಲೀಕರು, ಸಂಜೀವಿನಿ ಎಚ್ಎಫ್ ಕೌ ಫಾರಂ, ದೇವಸಮುದ್ರ.
‘ತಾಲ್ಲೂಕಿನಲ್ಲಿ ಮುಂದಿನ ದಿನ ಜಾನುವಾರುಗಳಿಗೆ ಮೇವು, ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ’.– ಜೂಗಲ ಮಂಜುನಾಯಕ, ತಹಶೀಲ್ದಾರ್, ಕಂಪ್ಲಿ
ತಾಲ್ಲೂಕಿನಲ್ಲಿ ಎತ್ತು, ಎಮ್ಮೆ, ಆಕಳು ಸೇರಿ 18,750 ಮತ್ತು ಕುರಿ, ಆಡು ಸೇರಿ 75,856 ಇದ್ದು, 8ರಿಂದ 10ತಿಂಗಳು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವುದಿಲ್ಲ– ಡಾ.ಕೆ.ಯು. ಬಸವರಾಜ, ಮುಖ್ಯ ಪಶು ವೈದ್ಯಾಧಿಕಾರಿ, ಪಶು ಚಿಕಿತ್ಸಾಲಯ, ಕಂಪ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.