ADVERTISEMENT

ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜೋಶಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 10:04 IST
Last Updated 15 ಏಪ್ರಿಲ್ 2025, 10:04 IST
   

ಬಳ್ಳಾರಿ: ‘88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯ ಹವಾಗುಣಕ್ಕೆ ತಕ್ಕಂತೆ ಡಿಸೆಂಬರ್‌ನಲ್ಲಿ ಆಯೋಜಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಸಮ್ಮೇಳನಗಳು ನಡೆದಿವೆ. 67 ವರ್ಷಗಳ ಬಳಿಕ ನಡೆಯುತ್ತಿರುವ ಈ ಸಮ್ಮೇಳನವು ಸರ್ಕಾರ, ಜಿಲ್ಲಾಡಳಿತ, ಪರಿಷತ್ತುಗಳ ಸಮನ್ವಯದೊಂದಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳೆರಡೂ ಒಟ್ಟುಗೂಡಿ ನಡೆಸಲಿವೆ’ ಎಂದು ಹೇಳಿದರು. 

‘ಬಳ್ಳಾರಿಯಲ್ಲಿ ಬಿಸಿಲು ಜಾಸ್ತಿ. ಇಲ್ಲಿನ ಹವಾಗುಣ ನೋಡಿಕೊಂಡು ಡಿಸೆಂಬರ್‌ನಲ್ಲಿ ಮೂರು ದಿನಗಳ ಸಮ್ಮೇಳನ ಆಯೋಜಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರೊಂದಿಗೆ ಚರ್ಚಿಸಿ ಸಮ್ಮೇಳನದ ದಿನಾಂಕ ನಿರ್ಧರಿಸಲಾಗುವುದು’ ಎಂದರು.  

ADVERTISEMENT

‘ಹಾವೇರಿ ಸಮ್ಮೇಳನಕ್ಕೆ ಕನ್ನಡ-ಇಂಗ್ಲಿಷ್ ನಿಘಂಟು ವಿದ್ವಾಂಸ ಫರ್ಡಿನಾಂಡ್‌ ಕಿಟೆಲ್‌ ಮೊಮ್ಮಗಳನ್ನು ಆಹ್ವಾನಿಸಲಾಗಿತ್ತು. ಮಂಡ್ಯದಲ್ಲಿ ನಡೆದ ಸಮ್ಮೇಳನಕ್ಕೆ ಸಾಹಿತಿಗಳ ಕುಟುಂಬಸ್ಥರನ್ನು ಆಹ್ವಾನಿಸಿ ಸನ್ಮಾನಿಸಲಾಗಿತ್ತು. ಬಳ್ಳಾರಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಇಲ್ಲಿನ ಮೊದಲ ಜಿಲ್ಲಾಧಿಕಾರಿ ಸರ್‌ ಥಾಮಸ್‌ ಮನ್ರೋ ಅವರ ಕುಟುಂಬಸ್ಥರನ್ನು ಆಹ್ವಾನಿಸಲಾಗುವುದು’ ಎಂದು ಅವರು ತಿಳಿಸಿದರು.  

‘ಈ ಸಮ್ಮೇಳನವು ಕನ್ನಡಿಗರ ಶೈಕ್ಷಣಿಕ ಮತ್ತು ಔದ್ಯೋಗಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ್ದಾಗಲಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಅನ್ನದ ಭಾಷೆ ಆಗಬೇಕು. ಇದರ ಕುರಿತ ಮೌಲ್ಯಾಧಾರಿತ ಚರ್ಚೆಗಳು ನಡೆಯಲಿವೆ’ ಎಂದು ಹೇಳಿದರು. 

‘ಹಾವೇರಿ ಸಮ್ಮೇಳನದಲ್ಲಿ ಕೈಗೊಂಡಿದ್ದ ಸಮಗ್ರ ಕನ್ನಡ ಭಾಷಾ ವಿಧೇಯಕ ಜಾರಿಯ ನಿರ್ಣಯವನ್ನು ಸರ್ಕಾರ ಸಾಕಾರಗೊಳಿಸಿದೆ’ ಎಂದು ಜೋಶಿ ಇದೇ ವೇಳೆ ತಿಳಿಸಿದರು.  

ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್‌ ಮಿಶ್ರಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.