ADVERTISEMENT

ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ: ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಿಗಿಲ್ಲ ಆಹ್ವಾನ

ನಿಗದಿಯಾಗದ ದಿನ, ಸ್ಥಳ; ನಿರ್ಣಯ ಇನ್ನೂ ಬಾಕಿ

ಆರ್. ಹರಿಶಂಕರ್
Published 2 ಜುಲೈ 2025, 5:55 IST
Last Updated 2 ಜುಲೈ 2025, 5:55 IST
<div class="paragraphs"><p>ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವ ಜಮೀರ್ ಅಹಮದ್‌, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌, ಎಸ್‌ಪಿ ಶೋಭಾರಾಣಿ ವಿ.ಜೆ., ಕಸಾಪ ಕೋಶಾಧ್ಯಕ್ಷ ಪಟೇಲ್‌ ಪಾಂಡು ಪಾಲ್ಗೊಂಡರು</p></div>

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವ ಜಮೀರ್ ಅಹಮದ್‌, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌, ಎಸ್‌ಪಿ ಶೋಭಾರಾಣಿ ವಿ.ಜೆ., ಕಸಾಪ ಕೋಶಾಧ್ಯಕ್ಷ ಪಟೇಲ್‌ ಪಾಂಡು ಪಾಲ್ಗೊಂಡರು

   

ಬಳ್ಳಾರಿ: ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಾಗಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಆದರೆ, ಈ ಸಭೆಗೆ ಪರಿಷತ್ತಿನ ಜಿ‌ಲ್ಲಾ ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸದೇ, ಕಡೆಗಣಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಪರಿಷತ್‌ ಕೇಂದ್ರ ಸಮಿತಿಯ ಅಧ್ಯಕ್ಷ ಮಹೇಶ ಜೋಶಿ, ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ, ಸಮ್ಮೇಳನದ ಸ್ಥಳ, ದಿನಾಂಕ, ಸಮಿತಿ ರಚನೆ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುವ ಬಳ್ಳಾರಿ ಜಿಲ್ಲಾ ಘಟಕದ ಪ್ರತಿನಿಧಿಗಳೂ ಇರಲಿಲ್ಲ.

ADVERTISEMENT

ಬೈಲಾ ಉಲ್ಲಂಘನೆ: ಯಾವುದೇ ಜಿಲ್ಲೆಯಲ್ಲಿ ಸಮ್ಮೇಳನ ನಡೆಯುವುದಿದ್ದರೆ, ಆಯಾ ಪರಿಷತ್ತಿನ ಜಿಲ್ಲಾ ಘಟಕದ ಜವಾಬ್ದಾರಿಯಲ್ಲಿ ಜಿಲ್ಲಾಡಳಿತದ ಸಹಕಾರ ಪಡೆಯಬೇಕು. ಸ್ವಾಗತ ಸಮಿತಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಆಗಿರಬೇಕು ಎಂಬ ವಿಷಯ ಪರಿಷತ್ತಿನ ಬೈಲಾದ 33ನೇ ಅಂಶದಲ್ಲಿದೆ.

ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರು ಸ್ವಾಗತ ಸಮಿತಿಯ ಸದಸ್ಯರಾಗಿರಬೇಕು. ಜಿಲ್ಲಾ ಘಟಕದ ಸಹಕಾರದೊಂದಿಗೆ ಕೇಂದ್ರ ಪರಿಷತ್ತು ಸಮ್ಮೇಳನ ಏರ್ಪಡಿಸಬೇಕು. ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸೌಲಭ್ಯ ವ್ಯವಸ್ಥೆಗಾಗಿ ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಹೊಣೆಗಾರಿಕೆ ಜಿಲ್ಲಾ ಘಟಕದ ಅಧ್ಯಕ್ಷರದ್ದಾಗಿರುತ್ತದೆ ಎಂದು ಜಿಲ್ಲಾ ಘಟಕದ ಪಾತ್ರವನ್ನು ಹೇಳಲಾಗಿದೆ. 

ಸಭೆ ಕುರಿತು ಪ್ರತಿಕ್ರಿಯೆ ಪಡೆಯರಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಲಭ್ಯವಾಗಲಿಲ್ಲ. ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.