ADVERTISEMENT

ಕಾರ ಹುಣ್ಣಿಮೆ ಸಂಭ್ರಮ: ಹೋರಿ ಓಡಿಸುವ ಸ್ಪರ್ಧೆಯಲ್ಲಿ ಯುವಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 15:21 IST
Last Updated 24 ಜೂನ್ 2021, 15:21 IST
ಕಾರ ಹುಣ್ಣಿಮೆ ಪ್ರಯುಕ್ತ ರೈತರೊಬ್ಬರು ಗುರುವಾರ ಹೊಸಪೇಟೆಯಲ್ಲಿ ಎತ್ತುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಅವುಗಳ ಮೆರವಣಿಗೆ ಮಾಡಿದರು
ಕಾರ ಹುಣ್ಣಿಮೆ ಪ್ರಯುಕ್ತ ರೈತರೊಬ್ಬರು ಗುರುವಾರ ಹೊಸಪೇಟೆಯಲ್ಲಿ ಎತ್ತುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಅವುಗಳ ಮೆರವಣಿಗೆ ಮಾಡಿದರು   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕಿನ ಹಳೆ ಮಲಪನಗುಡಿಯಲ್ಲಿ ಸಂಜೆ ನಡೆದ ಎತ್ತು ಓಡಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ಮಂಜುನಾಥ (23) ಎಂಬ ಯುವಕನಿಗೆ ಗುದ್ದಿದ್ದರಿಂದ ಅವರು ಕೆಳಗೆ ಬಿದ್ದು, ತಲೆಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ನಗರದ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ.

ಮುಂಗಾರಿನ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ರೈತರು ಬಹಳ ಸಂಭ್ರಮದಿಂದ ಆಚರಿಸಿದರು. ರೈತರು ಎತ್ತು, ಹಸುಗಳಿಗೆ ಸ್ನಾನ ಮಾಡಿಸಿ, ಕೋಡುಗಳಿಗೆ ಬಣ್ಣ ಬಳಿದು, ಹೂವಿನ ಗೊಂಡೆ, ಕೊರಳಿಗೆ ಗೆಜ್ಜೆ ಕಟ್ಟಿ, ಮೈತುಂಬ ವಿವಿಧ ಬಣ್ಣಗಳಿಂದ ಅಲಂಕರಿಸಿ, ಬಳಿಕ ತೆಂಗಿನಕಾಯಿ ಒಡೆದು, ನೈವೇದ್ಯ ಸಮರ್ಪಿಸಿ, ಪೂಜೆ ನೆರವೇರಿಸಿದರು. ಮಹಿಳೆಯರು ಆರತಿ ಬೆಳಗಿದರು.

ADVERTISEMENT

ತಾಲ್ಲೂಕಿನ ವೆಂಕಟಾಪುರ, ಹಳೆ ಮಲಪನಗುಡಿ ಸೇರಿದಂತೆ ಹಲವು ಭಾಗಗಳಲ್ಲಿ ಸಂಜೆ ಸ್ಪರ್ಧೆ ನಡೆಯಿತು. ಗ್ರಾಮಸ್ಥರು ರಸ್ತೆಯ ಇಕ್ಕೆಲ, ಕಟ್ಟಡಗಳ ಮೇಲೆ ನಿಂತುಕೊಂಡು ವೀಕ್ಷಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.