
ಬಳ್ಳಾರಿ: ‘ರಾಜ್ಯದ ಪ್ರತಿ ಸಮಾಜ, ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ವಸತಿ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿನ ಎಲ್ಲ ಹಿಂದುಳಿದ ವರ್ಗಗಳು, ಬಡವರು ಅಭಿವೃದ್ಧಿ ಹೊಂದಬೇಕು ಎಂಬುದೇ ನಮ್ಮ ಸರ್ಕಾರದ ಮುಖ್ಯ ಆಶಯ. ಸಿದ್ದರಾಮೇಶ್ವರರು ಭಕ್ತಿ, ಯೋಗ ಮತ್ತು ಸೇವೆಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ವ್ಯಕ್ತಿ’ ಎಂದು ತಿಳಿಸಿದರು.
ಸಂಸದ ಇ.ತುಕಾರಾಂ ಮಾತನಾಡಿ, ‘ಸಾರ್ವಜನಿಕರು ಪ್ರಜ್ಞಾವಂತರಾಗಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ಭೋವಿ ಸಮಾಜದವರು ಕಾಯಕಯೋಗಿಗಳು. ಮನೆ ಕಟ್ಟುವವರಾದರೂ ಆರೋಗ್ಯವಂತ ಸಮಾಜ ಕಟ್ಟಲು ಸಹ ಮುಂದಾಗಬೇಕು’ ಎಂದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ‘ಭೋವಿ ಸಮಾಜದ ಸಮಾಜದ ಅಭಿವೃದ್ಧಿಗೆ ಸದಾ ಬದ್ಧ’ ಎಂದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ‘ಶಿವಯೋಗಿ ಸಿದ್ದರಾಮೇಶ್ವರರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.
ಬಳ್ಳಾರಿಯ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂ ಭಾಷಾ ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಭೋವಿ (ವಡ್ಡರ) ಸಂಘದ ಅಧ್ಯಕ್ಷ ವಿ.ರಾಮಾಂಜನೇಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.