ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ಬಳ್ಳಾರಿ: ರಾಜ್ಯ ವಿಧಾನ ಮಂಡಲದ 9 ದಿನಗಳ ಅಧಿವೇಶನ ಶುಕ್ರವಾರ ಅಂತ್ಯವಾಗಿದ್ದು, ಜಿಲ್ಲೆಯ ಕೆಲವು ಶಾಸಕರು ಸರ್ಕಾರಕ್ಕೆ ಒಂದೇ ಒಂದು ಪ್ರಶ್ನೆಯನ್ನು ಕೇಳದೇ ಇರುವುದು, ಕ್ಷೇತ್ರ, ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸದೇ ಇರುವುದು ಬಹಿರಂಗವಾಗಿದೆ.
ಇದೇ ಹೊತ್ತಿನಲ್ಲೇ ಕೆಲವು ಶಾಸಕರು ತಾವು ಪ್ರತಿನಿಧಿಸುವ ಕ್ಷೇತ್ರ ಮತ್ತು ಜಿಲ್ಲೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿ ಉತ್ತರ, ಪರಿಹಾರ ಪಡೆಯುವ ಪ್ರಯತ್ನ ಮಾಡಿದ್ದಾರೆ.
ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಬಳ್ಳಾರಿ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ತುಂಗಭದ್ರ ಜಲಾಶಯದ ಗೇಟ್ ದುರಸ್ತಿ, ಸಮುದಾಯ ಭವನಗಳಿಗೆ ಜಮೀನು ಒದಗಿಸುವುದು, ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಯೋಜನೆಗಳೂ ಸೇರಿದಂತೆ ಅವರು ಒಟ್ಟು ನಾಲ್ಕು ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದಾರೆ. ಇದರ ಜತೆಗೆ, ಬಳ್ಳಾರಿ ಜಿಲ್ಲೆಯ ಜೋಳ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನ ಸೆಳೆಯುವ ಸೂಚನೆಯನ್ನೂ ಅವರು ಮಂಡಿಸಿದ್ದಾರೆ.
ಸಂಡೂರಿನಿಂದ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಇ. ಅನ್ನಪೂರ್ಣ ಅವರೂ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಕೇಳಿ ಗಮನಸೆಳೆದಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಸಿ.ಎಚ್ ಸೇಂದಿ (ಕ್ಲೋರೊ ಹೈಡ್ರೆಟ್ ಮಿಶ್ರಿತ ಸೇಂದಿ)ಯ ಕುರಿತು ಚುಕ್ಕಿ ಗುರುತಿನ ಪ್ರಶ್ನೆ ಕೇಳಿದ್ದ ಅವರು, ಇದಕ್ಕೆ ಪ್ರತಿಯಾಗಿ ಸಚಿವರಿಂದ ಉತ್ತರವನ್ನೂ ಪಡೆದುಕೊಂಡಿದ್ದರು. ಇದರ ಜತೆಗೆ, ವಿದ್ಯಾರ್ಥಿ ವಸತಿ ನಿಲಯಗಳ ಕುರಿತು ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಮೂರು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.
ಪ್ರಾಥಮಿಕ–ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಶಿಕ್ಷಣ ಇಲಾಖೆಗೆ ಅವರು ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಒಟ್ಟು 7 ಪ್ರಶ್ನೆಗಳನ್ನು ಈ ವಿಧಾನ ಮಂಡಲ ಅಧಿವೇಶನದಲ್ಲಿ ಅವರು ಸರ್ಕಾರಕ್ಕೆ ಕೇಳಿದ್ದಾರೆ.
ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ ಅವರು ನಿಯಮ-73ರ ಅಡಿಯಲ್ಲಿ ಜೀವರ್ಗಿ–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150-ಎ ಅಗಲೀಕರಣದ ಕುರಿತು ಪ್ರಶ್ನೆ ಮಾಡಿದ್ದಾರೆ. ಇದು ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆ ಎನಿಸಿದೆ.
ಬಳ್ಳಾರಿ ಜಿಲ್ಲೆಯಿಂದ ಆಯ್ಕೆಯಾಗದೇ ಇದ್ದರೂ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ತಾರಾನಾಥ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಪ್ರಶ್ನೆ ಕೇಳಿ ಗಮನಸೆಳೆದಿದ್ದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಈ ಬಾರಿ ಕಲ್ಯಾಣ ಕರ್ನಾಟಕದವರಿಗೆ ಮೀಸಲಾತಿ ಮತ್ತು ಅದರಲ್ಲಿ ಆಗುತ್ತಿರುವ ಲೋಪ ದೋಷಗಳ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಬಳ್ಳಾರಿ ವಿಮಾನ ನಿಲ್ದಾಣ ಮತ್ತು ತುಂಗಭದ್ರಾ ಜಲಾಶಯದ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.
ಪ್ರಶ್ನೆ ಕೇಳದ ನಾಗೇಂದ್ರ, ಭರತ್ ರೆಡ್ಡಿ: ಜಿಲ್ಲೆಯ ಎಲ್ಲ ಶಾಸಕರೂ ತಮ್ಮ ಕ್ಷೇತ್ರ, ಜಿಲ್ಲೆಗೆ ಸಂಬಂಧಿಸಿದ ವಿಷಯಗಳನ್ನು ಶಾಸನ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರೂ, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರಾಗಲಿ, ನಗರ ಶಾಸಕ ನಾರಾ ಭರತ್ ರೆಡ್ಡಿ ಅವರಾಗಲಿ ತಮ್ಮ ಕ್ಷೇತ್ರ, ಜಿಲ್ಲೆಗೆ ಸಂಬಂಧಿಸಿದಂತೆ ಒಂದೇ ಒಂದು ಪ್ರಶ್ನೆಯನ್ನೂ ಕೇಳದೇ ನಿರಾಸೆ ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.