ADVERTISEMENT

ಕುರುಗೋಡು | ಮಳೆ ಕೊರತೆ: ಬಾಡಿದ ಬೆಳೆ

ಬೆಳೆ ವಿಮೆ ಮಾಡಿಸಲು ಅಧಿಕಾರಿಗಳ ಸಲಹೆ

ವಾಗೀಶ ಕುರುಗೋಡು
Published 19 ಜುಲೈ 2025, 5:26 IST
Last Updated 19 ಜುಲೈ 2025, 5:26 IST
ಕುರುಗೋಡು ತಾಲ್ಲೂಕಿನ ಬಾಹನಟ್ಟಿ ಗ್ರಾಮದಲ್ಲಿ ಮಳೆಯಾಶ್ರಿತ ಜಮೀನಿನಲ್ಲಿ ಬೆಳೆದಿರುವ ಹೌಡಲ ಬೆಳೆ ಮಳೆಯಕೊರತೆಯಿಂದ ಬಾಡುವ ಹಂತ ತಲುಪಿರುವುದು
ಕುರುಗೋಡು ತಾಲ್ಲೂಕಿನ ಬಾಹನಟ್ಟಿ ಗ್ರಾಮದಲ್ಲಿ ಮಳೆಯಾಶ್ರಿತ ಜಮೀನಿನಲ್ಲಿ ಬೆಳೆದಿರುವ ಹೌಡಲ ಬೆಳೆ ಮಳೆಯಕೊರತೆಯಿಂದ ಬಾಡುವ ಹಂತ ತಲುಪಿರುವುದು   

ಕುರುಗೋಡು: ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ಪುಳಕಿತರಾಗಿದ್ದ ರೈತರು ಹತ್ತಿ, ನವಣೆ, ಸಜ್ಜೆ, ಔಡಲ, ತೊಗರಿ ಬಿತ್ತನೆ ಮಾಡಿ ಗೆಲುವಿನ ನಗೆ ಬೀರಿದ್ದರು.

ಕಳೆದ ಮೂರುವಾರಗಳಿಂದ ಮಳೆ ಮಾಯವಾದ ಪರಿಣಾಮ ಬೆಳೆದಿರುವ ಬೆಳೆ ಬೆಳವಣಿಗೆಯ ಹಂತದಲ್ಲಿಯೇ ಬಾಡುವ ಹಂತ ತಲುಪಿದೆ. ನಿತ್ಯ ಮೋಡ ಕವಿದ ವಾತಾವರಣವಿದ್ದು ಬೀಸುವ ಬಿರುಗಾಳಿಗೆ ಮಳೆಯಾಗದೆ ಮೋಡ ಮಾಯವಾಗಿ ರೈತರಲ್ಲಿ ನಿರಾಸೆ ಮೂಡುತ್ತಿದೆ.

ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಮಾಡಿರುವ ರೈತರು ಮಳೆ ಕೈಕೊಟ್ಟ ಪರಿಣಾಮ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.

ADVERTISEMENT

ಬೆಳೆಗ್ಗೆಯಿಂದ ಸಂಜೆಯ ವರೆಗೆ ಆಕಾಶದಲ್ಲಿ ದಟ್ಟಮೋಡ ಆವರಿಸಿದರೂ ಬೀಸುವ ಬಿರುಗಾಳಿಗೆ ಮೋಡ ಮಳೆಯಾಗದೆ ಮುಂದೆ ಸಾಗುತ್ತಿರುವುದು ಮಳೆಗಾಗಿ ಕಾಯುತ್ತಿರುವ ರೈತರಲ್ಲಿ ನಿರಾಸೆ ಮೂಡಿಸುತ್ತಿದೆ. 

ನೀರಾವರಿ ಭೂಮಿಯಲ್ಲಿ ಬೆಳೆಯುವ ಮೆಣಸಿನಕಾಯಿ, ಹತ್ತಿ ಮತ್ತು ಮೆಕ್ಕೆಜೋಳದ ಬೆಳೆಗೆ ಕಾಲುವೆ ನೀರು ಸಮರ್ಪಕವಾಗಿ ದೊರೆಯುವುದೆ? ಎನ್ನುವ ಆತಂಕ ಮತ್ತು ದುಗುಡ ರೈತರಲ್ಲಿ ಮನೆಮಾಡಿದೆ.

ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಮಳೆಯಾಶ್ರಿತ ಮತ್ತು 36,000 ಹೆಕ್ಟೇರ್ ನೀರಾವರಿ ಭೂಮಿ ಇದೆ.

ಈವರೆಗೆ 11 ಮಳೆದಿನಗಳಲ್ಲಿ ಒಟ್ಟು 6.2 ಸೆಂ.ಮೀ. ಮಾತ್ರ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 11.3 ಸೆಂ.ಮೀ. ಮಳೆಯಾಗಿತ್ತು.

ಕಡಿಮೆ ಮಳೆಯ ದಿನಗಳ ಪರಿಣಾಮ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಹೋದ ವರ್ಷ ಮಳೆ ಸಂಪೂರ್ಣ ಕೈಕೊಟ್ಟು ನಷ್ಟ ಅನುಭವಿಸಬೇಕಾಯಿತು. ಈ ವರ್ಷ ರೈತರಲ್ಲಿ ಆಸೆ ಮೂಡಿಸಿದ ಮುಂಗಾರು ಪೂರ್ಣ ಮಳೆ ಬಿತ್ತನೆಯ ನಂತರ ಕೈಕೊಟ್ಟ ಪರಿಣಾಮ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ಶೇಖಣ್ಣ ಅಳಲು ತೋಡಿಕೊಂಡರು.

ಅಶ್ವಿನಿ ಮತ್ತು ಕೃತಿಕಾ ಮಳೆ ಕೈಕೊಟ್ಟಿವೆ. ಮೃಗಶಿರ ಮತ್ತು ಆರಿದ್ರ ಮಳೆ ರೈತರನ್ನು ಕೈಬಿಡುವುದಿಲ್ಲ ಎಂಬ ಮಾತು ಹುಸಿಯಾಗುವ ಹಂತ ತಲುಪಿದೆ.

ಪುನರ್ವಸು ಮತ್ತು ಪುಷ್ಯ ಮಳೆ ಬರಬಹುದು ಎನ್ನುವ ಆಶಾಭಾವನೆಯಲ್ಲಿ ರೈತಾಪಿ ವರ್ಗ ಮಳೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದೆ.

ಮೋಡಮುಸುಕಿದ ವಾತಾವರಣವಿದ್ದರು ಮಳೆಯಾಗುತ್ತಿಲ್ಲ. ಸಾಲುಗಳ ಮಧ್ಯೆ ಹರಗುವುದರಿಂದ ಬೆಳೆ ಉಳಿಸಿಕೊಳ್ಳಬೇಕು. ರೈತರು ಕಡ್ಡಾಯವಾಗಿ ಬೆಳೆವಿಮೆ ಮಾಡಿಸಿಕೊಳ್ಳಬೇಕು
ಗರ್ಜೆಪ್ಪ ಸಹಾಯಕ ಕೃಷಿ ನಿರ್ದೇಶಕ ಕುರುಗೋಡು 

ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಯಾದ ಪ್ರದೇಶ 300 ಹೆಕ್ಟೇರ್ ತೊಗರಿ 25 ಹೆಕ್ಟೇರ್ ಔಡಲ 70 ಹೆಕ್ಟೇರ್ ಸಜ್ಜೆ 10 ಹೆಕ್ಟೇರ್ ನವಣೆ 5 ಹೆಕ್ಟೇರ್ ಶೇಂಗಾ ಮತ್ತು 70 ಹೆಕ್ಟೇರ್ ಹತ್ತಿ ಬಿತ್ತನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.