ADVERTISEMENT

ರೈತ ಸಂಘದಿಂದ ತುಂಗಭದ್ರೆಗೆ ಬಾಗಿನ ಸಮರ್ಪಣೆ 

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 7:14 IST
Last Updated 27 ಆಗಸ್ಟ್ 2020, 7:14 IST
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಗುರುವಾರ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಿಸಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಗುರುವಾರ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಿಸಿದರು   

ಹೊಸಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಗುರುವಾರ ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಮಾತನಾಡಿ, ‘ಸತತ ಮೂರು ವರ್ಷಗಳಿಂದ ತುಂಗಭದ್ರಾ ಜಲಾಶಯ ತುಂಬುತ್ತಿರುವುದು ಸಂತಸದ ಸಂಗತಿ. ಈ ವರ್ಷವೂ ಎರಡನೇ ಬೆಳೆಗೆ ನೀರು ಸಿಗುವುದು ಖಚಿತವಾಗಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಅವಿಭಜಿತ ಆಂಧ್ರ ಪ್ರದೇಶದ ರೈತರು ನಿಶ್ಚಿಂತೆಯಾಗಿದ್ದಾರೆ. ತುಂಗಭದ್ರೆ ಪ್ರತಿ ವರ್ಷ ಹೀಗೆಯೇ ತುಂಬುವುದರ ಮೂಲಕ ಸಮೃದ್ಧಿ ತರಬೇಕು. ರೈತರು ಮಿತವಾಗಿ ನೀರು ಬಳಸಿಕೊಂಡು ಕೃಷಿ ಚಟುವಟಿಕೆ ಮಾಡಬೇಕು’ ಎಂದು ಹೇಳಿದರು.

‘ಹೋದ ವರ್ಷ ಜಲಾಶಯದಿಂದ ನದಿಗೆ 250 ಟಿಎಂಸಿಗೂ ಅಧಿಕ ನೀರು ಹರಿಸಲಾಗಿದೆ. ಜಲಾಶಯ ತುಂಬಿದಾಗಲೆಲ್ಲ ಹೀಗೆಯೇ ಆಗುತ್ತಿದೆ. ಆ ನೀರಿನ ಸದ್ಬಳಕೆ ಆಗಬೇಕು. ವಿಜಯಪುರದಲ್ಲಿ ಎಲ್ಲ ಕೆರೆ, ಕಟ್ಟೆಗಳನ್ನು ತುಂಬಿಸಲಾಗಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿನ ಎಲ್ಲ ಕೆರೆ, ಕಟ್ಟೆಗಳನ್ನು ತುಂಬಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಕೆರೆ ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ’ ಎಂದರು.

ADVERTISEMENT

ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ವಿ. ಗೌಡ, ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಗೌರವ ಅಧ್ಯಕ್ಷ ರೇವಣಸಿದ್ದಪ್ಪ, ನಗರ ಘಟಕದ ಅಧ್ಯಕ್ಷ ನಾಗರಾಜ, ಮುಖಂಡರಾದ ಜಂಬಾನಹಳ್ಳಿ ವಸಂತ, ಚಿನ್ನದೊರೈ, ಎಲ್‌.ಎಸ್‌. ರುದ್ರಪ್ಪ, ಕಿರಣ್‌, ಎಚ್‌.ಜಿ. ಮಲ್ಲಿಕಾರ್ಜುನ, ನಾಗರಾಜ, ಉದ್ದಾನಯ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.