
ಬಳ್ಳಾರಿ: ಇತ್ತೀಚಿನ ವರ್ಷಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಅವಘಡಕ್ಕೆ ಕಾರಣವಾಗುತ್ತಿವೆ. ರಾಜ್ಯದಲ್ಲಿ 2021ರಿಂದ 2025ರ ನಡುವೆ ಸಂಭವಿಸಿರುವ ಸುಮಾರು 1.96 ಲಕ್ಷ ಅಪಘಾತಗಳಲ್ಲಿ 55,753 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2.38 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಅಪಘಾತಗಳಲ್ಲಿ ಭಾರಿ ಮತ್ತು ಲಘು ವಾಹನಗಳು ಸೇರಿವೆ. ಸರ್ಕಾರ ಸಾಕಷ್ಟು ಸುಧಾರಣಾ ಕ್ರಮ ಕೈಗೊಂಡರೂ ಅಪಘಾತಗಳ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗುತ್ತಿಲ್ಲ.
‘ಸಂಚಾರ ನಿಯಮ ಉಲ್ಲಂಘನೆ, ಅತಿವೇಗ, ಮದ್ಯದ ಅಮಲಿನಲ್ಲಿ ವಾಹನ ಚಾಲನೆ, ಹೆಲ್ಮೆಟ್ ರಹಿತ ವಾಹನ ಚಾಲನೆ, ಸುಸ್ಥಿತಿಯಲ್ಲಿ ಇರದ ವಾಹನಗಳ ಬಳಕೆ, ನಿದ್ರೆ ಮಂಪರು, ಹದಗೆಟ್ಟ ರಸ್ತೆ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ರಸ್ತೆ ಕಾಮಗಾರಿ ಇವೇ ಮುಂತಾದವು ಅಪಘಾತಕ್ಕೆ ಮೂಲ ಕಾರಣ’ ಎಂದು ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅಪಘಾತಗಳನ್ನು ತಡೆಯಲೆಂದೇ, ಸರ್ಕಾರವು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಗಳಿವೆ. ಈ ಸಮಿತಿಗಳಿಗೆ ನಿಯಮಿತ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಕೊರತೆ: ‘ವಾಹನಗಳ ಸುಸ್ಥಿತಿಯನ್ನು (ಫಿಟ್ನೆಸ್) ವೈಜ್ಞಾನಿಕವಾಗಿ, ಆಧುನಿಕ ಯಂತ್ರೋಪಕರಣ ಮೂಲಕ ಪರೀಕ್ಷಿಸುವ ಕೇಂದ್ರಗಳು ಪ್ರತಿ ಜಿಲ್ಲೆಗೂ ಬೇಕು. ಜಿಲ್ಲೆಗೊಂದರಂತೆ ರಾಜ್ಯದೆಲ್ದೆಡೆ 32 ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಆದರೆ, ಈವರೆಗೆ ರಾಜ್ಯದ ಮೂರು ಕಡೆ ಮಾತ್ರ ಇಂಥ ಕೇಂದ್ರಗಳು ಇವೆ. ಇನ್ನುಳಿದ ಕಡೆ ಇನ್ನೂ ಆರಂಭವಾಗಿಲ್ಲ’ ಎಂದು ಲಾರಿ ಚಾಲಕ ಮೆಹಬೂಬ್ ತಿಳಿಸಿದರು.
ಖಾಸಗಿ ಬಸ್‌ಗಳೇ ಹೆಚ್ಚು: ಖಾಸಗಿ ಟ್ರಾವೆಲ್ಸ್‌ಗಳ ಬಸ್‌ಗಳಲ್ಲೇ ಬೆಂಕಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿವೆ. ‘ಇಂಥ ಬಸ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಜೊತೆಗೆ ಸರಕು, ಸರಂಜಾಮು( ಪಾರ್ಸೆಲ್)ಗಳನ್ನು ಸಾಗಿಸುತ್ತವೆ. ಸರಕು ಸಾಗಿಸಬಹುದು. ಆದರೆ, ಬೇಗನೆ ಬೆಂಕಿ ಹೊತ್ತಿಕೊಳ್ಳುವಂತಹ, ಸ್ಫೋಟವಾಗುವ ಸಾಧ್ಯತೆಯುಳ್ಳ ಪದಾರ್ಥಗಳನ್ನು ಸಾಗಿಸಬಾರದು ಎಂದು ನಿಯಮಗಳು ಹೇಳುತ್ತವೆ. ಬಹುತೇಕ ಖಾಸಗಿ ಟ್ರಾವೆಲ್ಸ್‌ಗಳು ಇದನ್ನು ಪಾಲಿಸುತ್ತಿಲ್ಲ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ಬೆಂಕಿ ಅವಘಡಕ್ಕೆ ಪ್ರಮುಖ ಕಾರಣಗಳನ್ನು ತಿಳಿಸಿದರು.
‘ಬಸ್‌ಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳಲ್ಲಿ ಬಸ್‌ನಿಂದ ಹೊರ ಬರಲಾರದೇ ಸತ್ತ ಪ್ರಯಾಣಿಕರೇ ಹೆಚ್ಚು. ಬಸ್‌ಗಳಲ್ಲಿ ತುರ್ತು ನಿರ್ಗಮನದ ಬಾಗಿಲುಗಳು ಸರಿಯಾಗಿ ತೆರೆದುಕೊಳ್ಳದಿರುವುದು, ಈ ಬಗ್ಗೆ ಪ್ರಯಾಣಿಕರಿಗೆ ಸೂಕ್ತ ತಿಳಿವಳಿಕೆ ನೀಡದಿರುವುದು ಹಾಗೂ ಕಿಟಕಿಗೆ ಆಚೀಚೆ ಸರಿಸಲಾಗದಂತಹ ಅಥವಾ ಒಡೆಯುವುದಕ್ಕೂ ಸಾಧ್ಯವಾಗದಂತಹ ಗಾಜುಗಳನ್ನು ಅಳವಡಿಸಿರುವುದೂ ಇದಕ್ಕೆ ಕಾರಣ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.