ADVERTISEMENT

ನಿರ್ಲಕ್ಷ್ಯಕ್ಕೆ ಒಳಗಾದ ಕೆಂಚನಗುಡ್ಡ: ಪ್ರವಾಸೋದ್ಯಮ ಸೌಕರ್ಯಕ್ಕೆ ಬೇಕಿದೆ ಬಲ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:43 IST
Last Updated 27 ಅಕ್ಟೋಬರ್ 2025, 4:43 IST
ಕೆಂಚನಗುಡ್ಡ ಬಳಿಯ ವಿಜಯನಗರ ಕಾಲದ ಅಣೆಕಟ್ಟು ಹಾಗೂ ಕಾಲುವೆ ಮೂಲಕ ಹರಿಯುವ ತುಂಗಭದ್ರಾ ನದಿಯ ಮನಮೋಹಕ ದೃಶ್ಯ
ಕೆಂಚನಗುಡ್ಡ ಬಳಿಯ ವಿಜಯನಗರ ಕಾಲದ ಅಣೆಕಟ್ಟು ಹಾಗೂ ಕಾಲುವೆ ಮೂಲಕ ಹರಿಯುವ ತುಂಗಭದ್ರಾ ನದಿಯ ಮನಮೋಹಕ ದೃಶ್ಯ   

ತೆಕ್ಕಲಕೋಟೆ: ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ 2024-2029ನೇ ಸಾಲಿಗೆ ಸಿರುಗುಪ್ಪ ತಾಲ್ಲೂಕಿನ ಏಕೈಕ ಪ್ರವಾಸಿ ತಾಣವಾಗಿ ಕೆಂಚನಗುಡ್ಡ ಗುರುತಿಸಿಕೊಂಡಿದೆ. ಇದರಿಂದಾಗಿ ಮೂಲ ಸೌಕರ್ಯ ಅಭಿವೃದ್ಧಿ ಆಶಾಗೋಪುರ ಚಿಗುರಿದಂತಾಗಿದೆ. 

ಕೆಂಚನಗುಡ್ಡ ಗ್ರಾಮದ ಬಳಿ ತುಂಗಭದ್ರಾ ನದಿಗೆ ವಿಜಯನಗರ ಅರಸರು ನಿರ್ಮಿಸಿರುವ ಅಣೆಕಟ್ಟಿನಿಂದ ಹೊರ ಬೀಳುವ ನೀರು ಜಲಪಾತವಾಗಿ ಹರಿಯುತ್ತದೆ. ಈ ದೃಶ್ಯ ಕಣ್ತುಂಬಿಸಿಕೊಳ್ಳಲು ಬರುವ ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಇಲಾಖೆ ಇಲ್ಲಿ ಪ್ರವಾಸಿ ಕೇಂದ್ರ ಆರಂಭಿಸಲು ಮುಂದಾಗಿತ್ತು. 

ದುರಾದೃಷ್ಟವಶಾತ್ ಪ್ರವಾಸೋದ್ಯಮ ಇಲಾಖೆ ಆರಂಭಿಸಬೇಕಿದ್ದ ಪ್ರವಾಸಿ ಮಂದಿರ ನಿರ್ಮಾಣಗೊಂಡು, ಬಳಿಕ ಅರೆಬರೆ ಕಾಮಗಾರಿಯಾಗಿ ಪಾಳು ಬಿದ್ದಿದೆ.‌

ADVERTISEMENT

ಬಿಸಿಲ ನಾಡು ಬಳ್ಳಾರಿಯಲ್ಲಿ ಹಸಿರಿನ ಸುಂದರ ತಾಣ ಈ ಕೆಂಚನಗುಡ್ಡ, ಬಳ್ಳಾರಿಯಿಂದ 61 ಕಿ.ಮೀ., ಸಿರುಗುಪ್ಪದಿಂದ ಕೇವಲ 7 ಕಿ.ಮೀ. ದೂರದಲ್ಲಿದೆ.

ಈ ಪ್ರವಾಸಿ ಸ್ಥಳದ ಅಭಿವೃದ್ಧಿಗೆ ಪ್ರಾರಂಭದಲ್ಲಿ ಸರ್ಕಾರ ₹85 ಲಕ್ಷ ಬಿಡುಗಡೆ ಮಾಡಿತ್ತು. ತದನಂತರ ಹೆಚ್ಚುವರಿಯಾಗಿ ₹1 ಕೋಟಿ ಬಿಡುಗಡೆ ಸಹ ಆಗಿತ್ತು. ಜಿಂಕೆ ಉದ್ಯಾನ, ಪ್ರವಾಸಿಗರಿಗಾಗಿ ಯಾತ್ರಿ ನಿವಾಸ, ಅತಿಥಿ ಗೃಹ, ವೀಕ್ಷಣಾ ಮಂದಿರ, ದೋಣಿ ವಿಹಾರ, ಮಕ್ಕಳ ಉದ್ಯಾನ ವನ, ಮತ್ತಿತರ ಮನರಂಜನಾ ಚಟುವಟಿಕೆಗಳನ್ನು ಒದಗಿಸುವ ಮಹತ್ತರ ಯೋಜನೆ ಇದಾಗಿತ್ತು.

ಪಿಕ್‌ನಿಕ್ ತಾಣ: ವಿಜಯನಗರದ ಅರಸರ ಕಾಲದಲ್ಲಿ ಕಟ್ಟಿಸಿರುವ ಅಣೆಕಟ್ಟು ಹಾಗೂ ಕಾಲುವೆ ಇಂದಿಗೂ ಶಿಥಿಲವಾಗದೇ ಭದ್ರವಾಗಿದೆ. ಅಣೆಕಟ್ಟಿನಿಂದ ಧುಮ್ಮಿಕ್ಕುವ ಸಣ್ಣ ಜಲಪಾತ, ಪ್ರಕೃತಿ ಸೌಂದರ್ಯದಿಂದ ನಯನ ಮನೋಹರವಾಗಿ ಕಂಗೊಳಿಸುತ್ತದೆ.

ಕೆಂಚನಗುಡ್ಡ ಗ್ರಾಮದ ಗಂಗಾಧರೇಶ್ವರ ದೇವಸ್ಥಾನದ ವಿಹಂಗಮ ನೋಟ

ಇತಿಹಾಸ ಹಿನ್ನೆಲೆ

ಸಿರುಗುಪ್ಪದ ದಕ್ಷಿಣಕ್ಕೆ ಸುಮಾರು 6 ಕಿ.ಮೀ. ದೂರದಲ್ಲಿ ಕೆಂಚನಗುಡ್ಡವಿದೆ. ಇಲ್ಲಿ ಎರಡು ಕೋಟೆಗಳು ಇವೆ. ಅದರಲ್ಲಿ ಹೆಚ್ಚಿನ ಜನ ಕೋಟೆಯ ಒಳಭಾಗ ಮತ್ತು ಗುಡ್ಡದ ಮೇಲ್ಭಾಗದಲ್ಲಿ ವಾಸಿಸುತ್ತಿದ್ದರು. ‘ಇಲ್ಲಿ ಕೆಂಚನಗೌಡ ಎಂಬ ಸ್ಥಳೀಯ ಮುಖ್ಯಸ್ಥ ವಾಸಿಸುತ್ತಿದ್ದ. ಆದ್ದರಿಂದಲೇ ಈ ಸ್ಥಳಕ್ಕೆ ಕೆಂಚನಗುಡ್ಡ ಎಂದು ಕರೆಯಲ್ಪಟ್ಟಿತು’ ಎಂಬ ಐತಿಹ್ಯವಿದೆ. ಬೆಟ್ಟದ ಕೆಳಗಡೆ ಗಂಗಾಧರ ದೇವಸ್ಥಾನವಿದೆ. ಇಲ್ಲಿ 1708ರಲ್ಲಿ ಬರೆಯಲಾದ ಶಾಸನವಿದೆ. ಅಲ್ಲದೆ ಸಿದ್ಧ ಮಲ್ಯಯ್ಯ ಗುಡಿಯ ಬಳಿ ಕನ್ನಡದಲ್ಲಿ ಬರೆದ ಶಾಸನ ಇದೆ. ಹಾಗೆಯೇ ಮಂತ್ರಾಲಯದ ಪ್ರಸಿದ್ಧ ಸಂತ ರಾಘವೇಂದ್ರಸ್ವಾಮಿಯ ಬೃಂದಾವನವು ಭಕ್ತರನ್ನು ಸದಾ ಕೈಬೀಸಿ ಕರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.