
ಕುರುಗೋಡು: ಹಜರತ್ ಖಾಜಾ ಸೈಯದ್ ಷಾ ಖಾದರಲಿಂಗ ಸಾಹೇಬ್ (ಸ್ವಾಮಿ) ನಾಲ್ಕನೇ ವರ್ಷದ ಉರುಸ್ ಭಾನುವಾರ ಅದ್ದೂರಿಯಾಗಿ ನಡೆಯಿತು.
ಉರುಸ್ ಅಂಗವಾಗಿ ಶನಿವಾರ ರಾತ್ರಿ ಗಂಧದ ಮೆರವಣಿಗೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಧದ ಮೆರವಣಿಗೆ ಕಂಪ್ಲಿ ರಸ್ತೆಯಲ್ಲಿರುವ ಗದ್ದುಗೆ ಸ್ಥಳದಲ್ಲಿ ಸಮಾವೇಶವಾಯಿತು.
ಪಟಾಕಿ ಸದ್ದು, ತಾಸಿರಾಮ್, ರಾಮ್ ಡೋಲ್, ಹಲಗೆ, ಕೊಂಬು, ಕಹಳೆ ಭಾಗವಹಿಸಿ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.
ಉರುಸ್ ಅಂಗವಾಗಿ ಭಾನುವಾರ ಬೆಳಿಗ್ಗೆಯಿಂದ ಹಜರತ್ ಖಾಜಾ ಸೈಯದ್ ಷಾ ಖಾದರಲಿಂಗ ಸಾಹೇಬ್ (ಸ್ವಾಮಿ) ಗದ್ದುಗೆ ಸ್ಥಳದಲ್ಲಿ ವಿಶೇಷ ಪೂಜೆ ಧಾರ್ಮಿಕ ವಿಧಿವಿಧಾನಗಳು ನಡೆದವು. ಪಟ್ಟಣವೂ ಸೇರಿದಂತೆ ಜಿಲ್ಲೆ ಮತ್ತು ನೆರೆಯ ಆಂಧ್ರಪ್ರದೇಶದ ಕೆಲವು ಊರುಗಳಿಂದ ಬಂದಿದ್ದ ಭಕ್ತರು ಉರುಸ್ ವೈಭವ ಕಂಣ್ತುಂಬಿಕೊಂಡರು. ಸೋಮವಾರ ಜಿಯಾರತ್ ಕಾರ್ಯಕ್ರಮ ನಡೆಯಲಿದೆ.
ಉರುಸ್‍ನಲ್ಲಿ ಭಾಗವಹಿಸಿದ್ದ ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರುವ ಕುರುಗೋಡಿನಲ್ಲಿ ಖದರ್ ಲಿಂಗ ಸಾಹೇಬ್ ನೆಲೆ ನಿಂತಿರುವುದು ಹರ್ಷ ತಂದಿದೆ. ಎಲ್ಲ ಧರ್ಮಿಯರನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವ ಕ್ಷೇತ್ರವಾಗಿ ಬೆಳೆಯಲಿ. ನಾಡಿನ, ದೇಶದ ಜನತೆಗೆ, ಯುವಜನತೆ, ರೈತರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿರುವೆ ಎಂದರು.
ಶಾಸಕ ಜೆ.ಎನ್.ಗಣೇಶ್ ಮತ್ತು ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ಮತ್ತು ವಕ್ಫ್‍ಬೋರ್ಡ್ ಅಧ್ಯಕ್ಷ ಅಲಿಬಾಬ ಹುಸೇನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.