ADVERTISEMENT

ಬಳ್ಳಾರಿ| '74 ಕೆರೆಗಳಿಗೆ ತುಂಗಭದ್ರಾ ನದಿ ನೀರು'

ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ; ಶಾಸಕ ಶ್ರೀನಿವಾಸ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:41 IST
Last Updated 13 ಜುಲೈ 2024, 15:41 IST
ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಸೇತುವೆ ಕಾಮಗಾರಿಗೆ ಶಾಸಕ ಎನ್.ಟಿ.ಶ್ರೀನಿವಾಸ ಭೂಮಿಪೂಜೆ ನೆರವೇರಿಸಿದರು
ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಸೇತುವೆ ಕಾಮಗಾರಿಗೆ ಶಾಸಕ ಎನ್.ಟಿ.ಶ್ರೀನಿವಾಸ ಭೂಮಿಪೂಜೆ ನೆರವೇರಿಸಿದರು   

ಕೊಟ್ಟೂರು: ‘ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 74 ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ’ ಎಂದು ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್ ಹೇಳಿದರು.

ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕೆರೆ ತುಂಬಿಸುವ ಯೋಜನೆಯಲ್ಲಿ ಕಂಡುಬಂದ ಕೆಲವು ತಾಂತ್ರಿಕ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಭಾಗದ ಜನತೆಯ ಬಹು ವರ್ಷಗಳ ಕನಸು ಈಡೇರಿಸುವುದರ ಜೊತೆಗೆ ಕೂಡ್ಲಿಗಿಯನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಇದೆ’ ಎಂದರು.

ADVERTISEMENT

‘ಉಜ್ಜಯಿನಿ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಕೆಕೆಆರ್‌ಡಿಬಿ ಅಡಿ ₹ 2 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. ಎಸ್‌ಡಿಪಿ ಯೋಜನೆಯಡಿ ₹20 ಕೋಟಿ ವೆಚ್ಚದಲ್ಲಿ ಉಜ್ಜಯಿನಿ–ಕೂಡ್ಲಿಗಿ ರಸ್ತೆ, ₹3.78 ಕೋಟಿ ವೆಚ್ಚದಲ್ಲಿ ಉಜ್ಜಯಿನಿ–ತೂಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ’ ಎಂದು ಹೇಳಿದರು.

‘ಧಾರ್ಮಿಕ ಕ್ಷೇತ್ರವಾಗಿರುವುದರಿಂದ ₹10 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣವಾಗಲಿದೆ. ಇದಕ್ಕಾಗಿ ಗುರುತಿಸಿರುವ ಜಾಗವನ್ನು ಶೀಘ್ರದಲ್ಲೇ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಡಿ.ನಿಂಗಮ್ಮ, ಮುಖಂಡರಾದ ಕೊಡದಪ್ಪ, ಶಾಂತನಗೌಡ, ಲೋಕಣ್ಣ, ಅಂಜಿನಪ್ಪ, ನಿಂಗನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.