ADVERTISEMENT

ಲಾರಿಗೆ ಬಸ್ ಡಿಕ್ಕಿ: ನಿರ್ವಾಹಕನ ದೇಹ ಹೊಕ್ಕ ಕಬ್ಬಿಣದ ಸರಳುಗಳು  

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 6:21 IST
Last Updated 26 ಆಗಸ್ಟ್ 2020, 6:21 IST
ಬಸ್‌–ಲಾರಿ ನಡುವೆ ನಡೆದ ಅಪಘಾತದ ದೃಶ್ಯ
ಬಸ್‌–ಲಾರಿ ನಡುವೆ ನಡೆದ ಅಪಘಾತದ ದೃಶ್ಯ   

ಕೂಡ್ಲಿಗಿ: ಪಟ್ಟಣದ ಹೊರ ವಲಯದಲ್ಲಿನ ರಾಷ್ಟ್ರೀಯ ಹೆದ್ದರಿ-50ರಲ್ಲಿ ಮಂಗಳವಾರ ರಾತ್ರಿ ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ನಿರ್ವಾಹಕಶರಣಪ್ಪ ಅವರ ದೇಹ ಹೊಕ್ಕಿದ್ದ ಕಬ್ಬಿಣದ ಸರಳುಗಳನ್ನು 108 ವಾಹನದ ಸಿಬ್ಬಂದಿ ಹೊರಕ್ಕೆ ತೆಗೆದಿದ್ದಾರೆ.

ಕುಷ್ಟಗಿಯಿಂದ ಬೆಂಗಳೂರು ಕಡೆ ಹೊರಟಿದ್ದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಕುಷ್ಟಗಿ ಘಟಕದ ಬಸ್ ರಾಷ್ಟ್ರೀಯ ಹೆದ್ದಾರಿ-58ರಲ್ಲಿ ಕೂಡ್ಲಿಗಿ ಕಡೆ ಬರುತ್ತಿದ್ದಾಗ ಅಪಘಾತ ನಡೆದಿದೆ.

ಪಟ್ಟಣ ಹೊರ ವಲಯದಲ್ಲಿ ಶಿವಕುಮಾರ್ ಡಾಬಾ ಬಳಿ ಹೆದ್ದಾರಿಯಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದರಿಂದ ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿತ್ತು.

ADVERTISEMENT

ಲಾರಿಯಲ್ಲಿದ್ದ ಕಬ್ಬಿಣದ ಸರಳುಗಳು ಶರಣಪ್ಪ ಅವರ ಕೈ ಮತ್ತು, ದೇಹವನ್ನು ತೂರಿಕೊಂಡು ಹೊರಬಂದಿದ್ದರಿಂದ ಅವರು ಕದಲಲಾರದ ಪರಿಸ್ಥಿತಿಯಲ್ಲಿದ್ದರು.

108ರ ಸಿಬ್ಬಂದಿ ಹಾಗೂ ಕೂಡ್ಲಿಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಕಬ್ಬಿಣದ ರಾಡನ್ನು ಕತ್ತರಿಸಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.

ಶರಣಪ್ಪ ಅವರೊಂದಿಗೆ ಗಾಯಗೊಂಡಿರುವ ಇಬ್ಬರು ಪ್ರಯಾಣಿಕರು ಹಾಗೂ ಚಾಲಕ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.