ADVERTISEMENT

ಸಚಿವ ಮಾಧುಸ್ವಾಮಿ ವಜಾಕ್ಕೆ ಆಗ್ರಹ

ಸ್ವಾಮೀಜಿಗೆ ಅವಮಾನ; ಕುರುಬ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 10:31 IST
Last Updated 21 ನವೆಂಬರ್ 2019, 10:31 IST
ಬಳ್ಳಾರಿ ಜಿಲ್ಲಾ ಕುರುಬರ ಸಂಘ ಹಾಗೂ ತಾಲ್ಲೂಕು ಕನಕ ಯುವಸೇನೆ ಕಾರ್ಯಕರ್ತರು ಗುರುವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಬಳ್ಳಾರಿ ಜಿಲ್ಲಾ ಕುರುಬರ ಸಂಘ ಹಾಗೂ ತಾಲ್ಲೂಕು ಕನಕ ಯುವಸೇನೆ ಕಾರ್ಯಕರ್ತರು ಗುರುವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಮಾಜದ ಸ್ವಾಮೀಜಿ ವಿರುದ್ಧ ಹಗುರವಾಗಿ ಮಾತನಾಡಿ ಅವರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಳ್ಳಾರಿ ಜಿಲ್ಲಾ ಕುರುಬರ ಸಂಘ ಹಾಗೂ ತಾಲ್ಲೂಕು ಕನಕ ಯುವಸೇನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ರೋಟರಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಅವರ ಭಾವಚಿತ್ರಗಳನ್ನು ಹಿಡಿದುಕೊಂಡು ‘ಮಾಧುಸ್ವಾಮಿ ಅವರಿಗೆ ಧಿಕ್ಕಾರ’, ‘ಮಾಧುಸ್ವಾಮಿ ಕ್ಷಮೆ ಕೇಳಲಿ’ ಎಂದು ಘೋಷಣೆಗಳನ್ನು ಕೂಗಿದರು.

ನಂತರ ತಹಶೀಲ್ದಾರ್‌ ಡಿ.ಜಿ. ಹೆಗಡೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಘನತೆ ಸ್ಥಾನದಲ್ಲಿರುವ ಮಾಧುಸ್ವಾಮಿ ಅವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದ ವೃತ್ತಕ್ಕೆ ನಾಮಕರಣ ಮಾಡಿದ್ದ ಕನಕ ವೃತ್ತ ಎಂದು ಬರೆದಿದ್ದ ಫಲಕವನ್ನು ಒಂದು ಗುಂಪಿಗೆ ಕುಮ್ಮಕ್ಕು ನೀಡಿ ತೆಗೆಸಿದ್ದಾರೆ. ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಇದನ್ನು ಸಂಘ ಕಟುವಾಗಿ ಖಂಡಿಸುತ್ತದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಮಾಧುಸ್ವಾಮಿ ಅವರು ಕೂಡಲೇ ಸ್ವಾಮೀಜಿ ಕ್ಷಮೆ ಕೇಳಬೇಕು. ಕಾನೂನು ಸಚಿವರಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಎಲ್ಲಾ ಸಮಾಜದವರನ್ನು ಸಮಾನರಾಗಿ ಕಾಣಬೇಕು. ಅದು ಬಿಟ್ಟು ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುತ್ತಿರುವುದು ಸರಿಯಲ್ಲ. ಮಾಧುಸ್ವಾಮಿ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಹೊಸದುರ್ಗ ಶಾಖಾ ಮಠದ ಸ್ವಾಮೀಜಿ ಅವರು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆ ತರುವಂತಹದ್ದಲ್ಲ’ ಎಂದು ತಿಳಿಸಿದ್ದಾರೆ.

ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್‌. ಮಹೇಶ್‌, ನಿರ್ದೇಶಕ ಗೋಪಾಲಕೃಷ್ಣ, ಕನಕ ಯುಸೇನೆ ಮುಖಂಡರಾದ ಎ. ಎರ್ರಿಸ್ವಾಮಿ, ಎಲ್‌. ಆನಂದ, ಮೃತ್ಯುಂಜಯ, ಬಂದಿ ಜಂಬಯ್ಯ, ಗಂಟೆ ಜಗದೀಶ್‌, ರವಿಕುಮಾರ, ಪ್ರಕಾಶ ಕಾಕುಬಾಳು, ರವಿಶಂಕರ ದೇವರಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.