
ಕುರುಗೋಡು: ಸೂರ್ಯ ಪಡುವಣದತ್ತ ಹಸ್ತಂಗತನಾಗುತ್ತಿದ್ದಂತೆ ಇತ್ತ ವಾರಣಾಸಿ ಗಂಗಾರತಿ ಅರ್ಚಕರ ತಂಡದ ಪ್ರಧಾನ ಅರ್ಚಕ ಅಚಾರ್ಯ ಪಾಂಡ್ಯ ನೇತೃತ್ವದ 11 ಜನ ಸದಸ್ಯರಿಂದ ರುದ್ರ ನಮಕಂ, ರುದ್ರ ಚಮಕಂ ಮಂತ್ರ, ವೇದ ಘೋಷ ಮೊಳಗಿದವು. ಧೂಪ ಮತ್ತು ದೀಪಗಳು ಪ್ರಜ್ವಲಿಸಿದವು. ಢಮರುಗ, ಶಂಖಾನಾಧ, ಘಂಟಾನಾದ, ಕಂಚಿಮೇಳ, ತಾಳಮದ್ದಲೆ, ಚಂಡೆವಾದನ, ಮಂಗಳವಾದ್ಯ, ಕೊಂಬು ಕಹಳೆಗಳ ಸದ್ದು ಭಕ್ತಿ ರಸದಲ್ಲಿ ಮಿಂದೇಳುವಂತೆ ಮಾಡಿತು. ಪ್ರೇಕ್ಷಕರು ದೊಡ್ಡ ಬಸವೇಶ್ವರ ಸ್ವಾಮಿಗೆ ಜಯಕಾರ ಕೂಗುತ್ತಾ ಭಕ್ತಿ-ಭಾವದಿಂದ ಪರವಶರಾದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಉತ್ಸವದ ಅಂಗವಾಗಿ ಭಾನುವಾರ ಸಂಜೆ ವಾರಣಾಸಿಯಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿ ಜರುಗಿದ ಶಿವಬಸವ ಆರತಿಗೆ ಸಾಕ್ಷಿಯಾದರು.
ದೊಡ್ಡಬಸವೇಶ್ವರ ಸ್ವಾಮಿಗೆ ಶಿವಬಸವ ಆರತಿ ಬೆಳಗುತ್ತಿದ್ದಂತೆ ದೇವಸ್ಥಾನದ ಸುತ್ತಮುತ್ತ ನಿರ್ಮಿಸಿದ್ದ ವೇದಿಕೆಗಳಲ್ಲಿ ನೃತ್ಯಗಾರ್ತಿಯರು ಏಕಕಾಲಕ್ಕೆ ಭರತ ನಾಟ್ಯ ಪ್ರದರ್ಶನ ನೀಡಿ ನೋಡುಗರನ್ನು ಮಂತ್ರಮುಕ್ತಗೊಳಿಸಿದರು.
ಕುಟುಂಬ ಸಮೇತರಾಗಿ ಆಗಮಿಸಿದ್ದ ಶಾಸಕ ಜೆ.ಎನ್.ಗಣೇಶ್ ಶಿವಬಸವ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರ್ಕಾರಿ ನೌಕರರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ನರಸಪ್ಪ ತಹಶೀಲ್ದಾರ್, ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸ್‍ಐ ಸುಪ್ರಿತ್, ಪುರಸಭೆ ಅಧ್ಯಕ್ಷ ಶೇಖಣ್ಣ, ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.