
ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಕಾರ್ಮಿಕರ ಪ್ರತಿಭಟನೆ ಅಂಗವಾಗಿ ಎಐಯುಟಿಯುಸಿ ನೇತೃತ್ವದಲ್ಲಿ ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದಲ್ಲಿ ಬುಧವಾರ ಕಾರ್ಮಿಕರ ಪ್ರತಿಭಟನೆ ನಡೆಯಿತು.
ಎಐಯುಟಿಯುಸಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಡಾ.ಪ್ರಮೋದ್.ಎನ್ ಮಾತನಾಡಿ, ‘ಕೇಂದ್ರ ಬಿಜೆಪಿ ಸರ್ಕಾರವು ಈ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಅಪ್ರಜಾತಾಂತ್ರಿಕವಾಗಿ ಜಾರಿಗೊಳಿಸಿದೆ. ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಸಂಸತ್‌ನಲ್ಲಿ ಯಾವ ವಿರೋಧ ಪಕ್ಷಗಳು, ಇವುಗಳ ವಿರುದ್ದ ಧ್ವನಿ ಎತ್ತಿಲ್ಲ. ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಲೇಬರ್ ಕೋಡ್‌ಗಳನ್ನು ಜಾರಿಗೆ ತರದೆ, ಕಾರ್ಮಿಕರ ಪರ ನಿಲ್ಲಬೇಕು’ ಎಂದರು
‘ಈ ಲೇಬರ್ ಕೋಡ್‌ಗಳ ಮೂಲಕ ನಿಗದಿತ ಅವಧಿಯ ಉದ್ಯೋಗ ಜಾರಿ ಮಾಡಿ, ಖಾಯಂ ಉದ್ಯೋಗಗಳಿಗೆ ಸಂಪೂರ್ಣವಾಗಿ ತಿಲಾಂಜಲಿ ನೀಡಲಾಗುತ್ತದೆ. ಕಾರ್ಮಿಕರನ್ನು ಕೆಲಸದಿಂದ ಕಿತ್ತೊಗೆಯುವ ‘ಹೈರ್ ಅಂಡ್ ಫೈರ್’ ನಿಯಮ ಪಾಲಿಸಲಾಗುತ್ತದೆ. ಇದು ಅತ್ಯಂತ ಖಂಡನೀಯವಾದದ್ದು. ಮುಷ್ಕರ ನಡೆಸಬೇಕೆಂದೆನ್ನುವ ಕಾರ್ಮಿಕರು, ವಿವಿಧ ಪ್ರಕ್ರಿಯೆಗಳನ್ನು ದಾಟಿ, 60 ದಿನ ಕಾಯಬೇಕು. ಅಲ್ಲಿಗೆ ಕಾರ್ಮಿಕರು ಹೋರಾಟದ ಹಕ್ಕುಗಳನ್ನು ನಿರ್ನಾಮ ಮಾಡಿದಂತೆ. ಇಂಥ ಅನೇಕ ತಿದ್ದುಪಡಿಗಳು 4 ಕಾನೂನುಗಳಲ್ಲಿವೆ. ಇವುಗಳು ‘ವ್ಯವಹಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ, ಕಾರ್ಮಿಕರ ಹಕ್ಕುಗಳನ್ನು ಮತ್ತು ರಕ್ಷಣೆಯನ್ನು ಮೊಟಕುಗೊಳಿಸುವ ಕಾನೂನುಗಳಾಗಿವೆ. ಇವು ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಉದ್ಯಮಗಳ ಪರವಾಗಿವೆ. ಕಾರ್ಮಿಕರು ಬೃಹತ್ ಹೋರಾಟಕ್ಕೆ ಸಜ್ಜಾಗಬೇಕು’ ಎಂದರು
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಆರ್.ಸೋಮಶೇಖರ್ ಗೌಡ, ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್, ಶರ್ಮಾಸ್, ಕಿರಣ್ ಕುಮಾರ್, ಚೈತನ್ಯ, ಹೊನ್ನೂರು ಬಿ, ಸುರೇಶ್, ಮುರಳಿ ಕೃಷ್ಣ, ಪ್ರವೀಣ್, ಖಾಜಾಸಾಬ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.