ADVERTISEMENT

ಕಂಪ್ಲಿ: ಸಕಾಲಕ್ಕೆ ಬಾರದ ಬಸ್‌ಗಳು, ಗ್ರಾಮೀಣ ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 4:24 IST
Last Updated 15 ಸೆಪ್ಟೆಂಬರ್ 2021, 4:24 IST
ಕಂಪ್ಲಿ ಸಮೀಪದ ಹೊಸದರೋಜಿ ಬಸ್ ನಿಲ್ದಾಣದಲ್ಲಿ ಬಳ್ಳಾರಿ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಏರಲು ಪ್ರಯಾಣಿಕರೊಂದಿಗೆ ಪೈಪೋಟಿ ನಡೆಸಿದ ದೃಶ್ಯ ಮಂಗಳವಾರ ಕಂಡುಬಂತು
ಕಂಪ್ಲಿ ಸಮೀಪದ ಹೊಸದರೋಜಿ ಬಸ್ ನಿಲ್ದಾಣದಲ್ಲಿ ಬಳ್ಳಾರಿ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಏರಲು ಪ್ರಯಾಣಿಕರೊಂದಿಗೆ ಪೈಪೋಟಿ ನಡೆಸಿದ ದೃಶ್ಯ ಮಂಗಳವಾರ ಕಂಡುಬಂತು   

ಕಂಪ್ಲಿ: ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬಳ್ಳಾರಿಯ ಶಾಲಾ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಸಕಾಲಕ್ಕೆ ಬಸ್ ಸಿಗದೆ ಪರದಾಡುವಂತಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ಮೆಟ್ರಿ, ಜವುಕು, ಜೀರಿಗನೂರು, ಗೋನಾಳು, ದೇವಲಾಪುರ, ಸುಗ್ಗೇನಹಳ್ಳಿ, ಮಾವಿನಹಳ್ಳಿ, ಹೊನ್ನಳ್ಳಿ, ಸಂಡೂರು ತಾಲ್ಲೂಕಿನ ಹಳೇದರೋಜಿ, ಹೊಸದರೋಜಿ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ಕಾಯುವುದೆ ಕಾಯಕವಾಗಿದೆ.

ಬೆಳಿಗ್ಗೆ 6ರಿಂದ 9ಗಂಟೆಯಾದರೂ ಗಂಗಾವತಿ, ಕಂಪ್ಲಿಯಿಂದ ಈ ಹಳ್ಳಿ ಮಾರ್ಗವಾಗಿ ಸಂಚರಿಸಬೇಕಾದ ಬಸ್‍ಗಳು ಬರುತ್ತಿಲ್ಲ. ಒಂದು ವೇಳೆ ಬಸ್ ಬಂದರೂ ವಿಪರೀತ ನುಗ್ಗಾಟ. ಸರ್ಕಸ್ ಮಾಡಿ ಬಸ್ ಹತ್ತಬೇಕು. ಕಷ್ಟಪಟ್ಟು ಶಾಲಾ ಕಾಲೇಜಿಗೆ ಹೋಗಿ ಬಂದ ನಂತರ ಸ್ವಗ್ರಾಮ ಸೇರಲು ಮತ್ತೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಬಸ್‍ಗಾಗಿ ಕಾಯಬೇಕಾದ ಅನಿವಾರ್ಯತೆ ಸಾಮಾನ್ಯವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ADVERTISEMENT

ಈ ಮಾರ್ಗದಲ್ಲಿ ಬೆಳಗಿನ ವೇಳೆ ಅನಂತಪುರ, ಮಂತ್ರಾಲಯಕ್ಕೆ ತೆರಳುವ ಬಸ್‍ಗಳು ಅಂತರರಾಜ್ಯ ಸೇವೆ ಎಂದು ರಿಯಾಯ್ತಿ ಪಾಸ್‍ಗೆ ಅನುಮತಿ ನೀಡುವುದಿಲ್ಲ. ಇದೇ ವೇಳೆ ಬರುವ ಗಂಗಾವತಿ-ಬೆಂಗಳೂರು ಬಸ್ ಎಕ್ಸ್‍ಪ್ರೆಸ್ ಸೇವೆಯಾಗಿದ್ದು, ಯಾವ ಹಳ್ಳಿಗಳು ನಿಲುಗಡೆ ಇಲ್ಲ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ಕೊರೊನಾದಿಂದ ಒಂದೂವರೆ ವರ್ಷ ಸರಿಯಾಗಿ ಶಾಲಾ ಕಾಲೇಜುಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗಿದ್ದೇವೆ. ಇದೀಗ ಶಾಲಾ ಕಾಲೇಜು ಆರಂಭವಾಗಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಸೇವೆ ಒದಗಿಸುವ ಮೂಲಕ ಜಿಲ್ಲೆಯವರಾದ ಸಾರಿಗೆ ಸಚಿವ ಬಿ. ಶ್ರೀರಾಮುಲು, ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಾದ ಕೆ. ಹೇಮೇಶ್ವರ, ಉದಯ ಕುಮಾರ್, ಶಿವು, ಶಿವಶಂಕರ್, ಹೈಯದ ಬೀ, ನೀಲಾವತಿ, ಮಂಜುಳಾ, ನೇತ್ರಾವತಿ, ಪಾರ್ವತಿ, ಸುಷ್ಮಾ, ಕಲಾವತಿ, ಶ್ರೀಕಾಂತ್, ಸಿದ್ದೇಶ, ಯುವರಾಜ್, ಮಣಿಕಂಠ, ಸುರೇಶ್, ಕವಿತಾ, ರೋಜಾ, ಕಲ್ಪನಾ, ಕಾವ್ಯ, ನಾಗರಾಜ್, ಶಶಿಕುಮಾರ್, ಸಂಗೀತ, ಸಮೀರ್ ಮನವಿ ಮಾಡಿದರು.

ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ನಿಗದಿತ ದಿನ ಹೋರಾಟ ಹಮ್ಮಿಕೊಳ್ಳುವುದಾಗಿಯೂ ವಿದ್ಯಾರ್ಥಿಗಳು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.