ADVERTISEMENT

ಬಳ್ಳಾರಿ | ಬೇರೆ ಉದ್ದಿಮೆಗೆ ಭೂಮಿ: ಸಂಘಟನೆಗಳ ಆಕ್ರೋಶ

ಕೆಐಎಡಿಬಿ ನಡೆಗೆ ಸಿಐಟಿಯುಸಿ ಅಸಮಾಧಾನ | ಪರಿಸರ ಆಲಿಕೆ ಸಭೆಗೆ ಆಕ್ಷೇಪ| ಹೊಸ ಭೂಬೆಲೆ ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:34 IST
Last Updated 16 ಸೆಪ್ಟೆಂಬರ್ 2025, 4:34 IST
ಆರ್ಸೆಲರ್‌ ಮಿತ್ತಲ್‌ಗೆ ನೀಡಿದ ಭೂಮಿಯನ್ನು ಕೆಐಎಡಿಬಿ ಹೆಚ್ಚಿನ ಬೆಲೆಗೆ ಬೇರೆ ಕಂಪನಿಗೆ ನೀಡುತ್ತಿರುವುದು ಮತ್ತು ರೈತರ ಭೂಮಿಗೆ ಹೊಸ ಭೂಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು
ಆರ್ಸೆಲರ್‌ ಮಿತ್ತಲ್‌ಗೆ ನೀಡಿದ ಭೂಮಿಯನ್ನು ಕೆಐಎಡಿಬಿ ಹೆಚ್ಚಿನ ಬೆಲೆಗೆ ಬೇರೆ ಕಂಪನಿಗೆ ನೀಡುತ್ತಿರುವುದು ಮತ್ತು ರೈತರ ಭೂಮಿಗೆ ಹೊಸ ಭೂಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು   

ಬಳ್ಳಾರಿ: ಆರ್ಸೆಲರ್‌ ಮಿತ್ತಲ್‌ನ ಕೈಗಾರಿಕೆಗಾಗಿ ರೈತರಿಂದ ಕೆಐಎಡಿಬಿ ವಶಪಡಿಸಿಕೊಂಡ ಜಮೀನಿನಲ್ಲಿ ಜೆಎಸ್‌ಡಬ್ಯ್ಲುವಿನ ಉದ್ದಿಮೆ ಆರಂಭಿಸಲು ಇದೇ 17ರಂದು ಕರೆಯಲಾಗಿರುವ ಪರಿಸರ ಆಲಿಕೆ ಸಭೆಯನ್ನು ರದ್ದು ಮಾಡಬೇಕು ಎಂದು ಸೆಂಟರ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಆಗ್ರಹಿಸಿದೆ. 

ಹಿಂದೆ ವಶಕ್ಕೆ ಪಡೆಯಲಾಗಿದ್ದ ಭೂಮಿಗೆ ಹೊಸ ಭೂಬೆಲೆ ನಿಗದಿ ಮಾಡಬೇಕು ಎಂದೂ ಸಂಘಟನೆ ಒತ್ತಾಸಿದೆ. ಈ ಕುರಿತು ಸಂಘಟನೆ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ಮಾಡಿದ ರೈತರು, ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.  

‘ಆರ್ಸೆಲರ್‌ ಮಿತ್ತಲ್ ಸ್ಟೀಲ್ ಕಂಪನಿಗೆಂದು ಅಧಿಸೂಚನೆ ಹೊರಡಿಸಿ ಕೆಐಎಡಿಬಿಯು 2010ರಲ್ಲಿ ಕುಡತಿನಿ, ಹರಗಿನಡೋಣಿ ಗ್ರಾಮಕ್ಕೆ ಸೇರಿದ ಒಟ್ಟು 5368.33 ಎಕರೆ ಜಮೀನುಗಳನ್ನು ಬಲವಂತವಾಗಿ ಭೂ ಸ್ವಾಧೀನ ಮಾಡಿತ್ತು. ಆ ಸಂದರ್ಭದಲ್ಲಿ ಮಿತ್ತಲ್ ಕಂಪನಿಯು ಉತ್ತಮ ಭೂ ಬೆಲೆ ನೀಡುವುದಾಗಿಯೂ, ಕಬ್ಬಿಣದ ಕೈಗಾರಿಕೆಯನ್ನು ಮೂರು ವರ್ಷದೊಳಗೆ ನಿರ್ಮಿಸಿ ಮನೆಗೊಂದು ಉದ್ಯೋಗ ನೀಡುವುದಾಗಿಯೂ ಹೇಳಿತ್ತು. ಅದಕ್ಕೆ ಸ್ಥಳೀಯ ರೈತರೂ ಒಪ್ಪಿದ್ದರು. ಆದರೆ, ಕಂಪನಿಯಿಂದ ಸರಿಯಾದ ಭೂಬೆಲೆ ಸಿಗಲಿಲ್ಲ. . ಉದ್ಯೋಗವೂ ಸಿಗಲಿಲ್ಲ. ಈಗ ಆ ಭೂಮಿಯನ್ನು ಬೇರೆ ಕಂಪನಿಗೆ ನೀಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ರೈತರ ಪ್ರತಿಭಟನೆಯ ನಡುವೆಯೂ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಯಿತೋ, ಆ ಉದ್ದೇಶಕ್ಕೆ ಈಗ ಎಳ್ಳು ನೀರು ಬಿಡಲಾಗಿದೆ’ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. 

‘ಮೂಲ ಉದ್ದೇಶಕ್ಕೆ ಬಳಕೆಯಾಗದ ಜಮೀನನ್ನು ರೈತರಿಗೆ ನೀಡದೇ ಅಕ್ರಮವಾಗಿ ನಿವೇಶಗಳನ್ನು ಮಾಡಿ ಎಕರೆಗೆ ತಲಾ ₹58 ಲಕ್ಷಕ್ಕೆ ಕೆಐಎಡಿಬಿ ಮಾರಾಟ ಮಾಡುತ್ತಿದೆ. ಈ ಕೂಡಲೇ ನಿವೇಶನ ಮಾಡುವುದನ್ನೂ ಕೆಐಎಡಿಬಿ ನಿಲ್ಲಿಸಬೇಕು. ಸರ್ಕಾರ ಹಾಗೂ ಜಿಲ್ಲಾ ಆಡಳಿತ ಮಧ್ಯ ಪ್ರವೇಶಿಸಿ ಈ ಅಕ್ರಮ ತಡೆಯಬೇಕು. ಬೇರೆ ಕಂಪನಿಯ ಉದ್ದಿಮೆ ಉದ್ದೇಶಕ್ಕೆ ಇದೇ 17ರಂದು ನಡೆಯುತ್ತಿರುವ ಪರಿಸರ ಆಲಿಕೆ ಸಭೆಯನ್ನು ನಿಲ್ಲಿಸಬೇಕು. ರೈತರಿಗೆ ಹೊಸ ಭೂಬೆಲೆ ನಿಗದಿ ಮಾಡಬೇಕು’ ಎಂದು ಸಂಘಟನೆ ಆಗ್ರಹಿಸಿದೆ. 

ಈ ಹೋರಾಟಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ, ಭೂ ಸಂತ್ರಸ್ಥರ ಹೋರಾಟ ಸಮಿತಿ,
ಕನ್ನಡ ಪರ ಸಂಘಟನೆಗಳ ಒಕ್ಕೂಟಗಳು ಬೆಂಬಲ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.