ADVERTISEMENT

ಬಳ್ಳಾರಿ | ಹೋರಾಟ ತೀವ್ರಗೊಳಿಸಲು ಭೂಸಂತ್ರಸ್ತರ ತೀರ್ಮಾನ

ಅಭಿವೃದ್ಧಿಪಡಿಸಿದ ಭೂಮಿಯನ್ನೇ ಪರಿಹಾರವಾಗಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 5:09 IST
Last Updated 25 ಜುಲೈ 2025, 5:09 IST
ಯು. ಬಸವರಾಜು 
ಯು. ಬಸವರಾಜು    

ಬಳ್ಳಾರಿ: ‘ಕುಡುತಿನಿ ಸುತ್ತಮುತ್ತ 12,000 ಎಕರೆಗೂ ಅಧಿಕ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದಿರುವ ಸರ್ಕಾರ ಬೆಲೆ ನಿಗದಿಯಲ್ಲಿ ಮೋಸ ಮಾಡಿದೆ. 2010ರಿಂದ ಈ ವರೆಗೆ ಕೈಗಾರಿಕೆ ಸ್ಥಾಪನೆಯಾಗದೇ, ಉದ್ಯೋಗ ನಷ್ಟವಾಗಿದೆ. ಇನ್ನು ಮುಂದೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಕುಡುತಿನಿ ಭೂಸಂತ್ರಸ್ತ ಹೋರಾಟಗಾರರು ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು. ಬಸವರಾಜು, ‘ಯಡಿಯೂರಪ್ಪ ಅವರ ಸರ್ಕಾರ ಮೋಸದಿಂದ ಭೂಮಿ ಕಸಿಯಿತು. ಸಿದ್ದರಾಮಯ್ಯ ಅವರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ನಮ್ಮ ಹೋರಾಟದ ಟೆಂಟ್‌ಗೆ ಬಂದು ವಾಗ್ದಾನ ನೀಡಿದರು. ಆದರೆ, ಪರಿಹಾರ ಸಿಕ್ಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಮೂರು ನ್ಯಾಯಾಲಯಗಳಲ್ಲಿಯೂ ರೈತರ ಪರವಾಗಿಯೇ ತೀರ್ಪುಗಳು ಬಂದಿವೆ. ಕನಿಷ್ಠ ₹1.20–1.50 ಕೋಟಿ ಪರಿಹಾರ ನೀಡಬೇಕು ಎಂದು ಹೇಳಿವೆ. ಆದರೂ ಪರಿಹಾರ ಸಿಕ್ಕಿಲ್ಲ. 12ಸಾವಿರ ಎಕರೆಗೆ ಲೆಕ್ಕ ಹಾಕಿದರೆ, ಕನಿಷ್ಠ ₹22 ಸಾವಿರ ಕೋಟಿ ರೈತರಿಗೆ ನಷ್ಟವಾಗಿದೆ’ ಎಂದು ಅವರು ಆರೋಪಿಸಿದರು. 

ADVERTISEMENT

‘ ಮೂರು ಕಬ್ಬಿಣ ಕಾರ್ಖಾನೆಗಳಿಗೆಂದು 12 ಸಾವಿರ ಎರಕೆಗೂ ಅಧಿಕ ಭೂಮಿ ವಶಕ್ಕೆ ಪಡೆಯಲಾಗಿದೆ. ವಾಸ್ತವದಲ್ಲಿ  5-6 ಸಾವಿರ ಎಕರೆ ಭೂಮಿ ಸಾಕು. ಈಗ 12 ಸಾವಿರ ಎಕರೆಗೆ ಪರಿಹಾರ ನೀಡುವುದು ಸರ್ಕಾರಕ್ಕೂ ಕಷ್ಟವಾಗಬಹುದು. ಆದ್ದರಿಂದ ವಶ ಪಡಿಸಿಕೊಂಡ ಒಟ್ಟು ಭೂಮಿಯಲ್ಲಿ ಶೇ. 50ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ನೀಡಿ’ ಎಂದು ಅವರು ಆಗ್ರಹಿಸಿದರು. 

‘ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮೂರು ಹಂತದ ಹೋರಾಟ ರೂಪಿಸಿದ್ದೇವೆ. ಶಾಸಕರ ಮನೆಗಳ ಎದುರು ಮೊದಲಿಗೆ ಪ್ರತಿಭಟನೆ ಮಾಡುತ್ತೇವೆ. ಬಳಿಕ ಬಳ್ಳಾರಿ ಬಂದ್‌ ಮಾಡುತ್ತೇವೆ. ಆ ಬಳಿಕ 3000 ರೈತರು ಬೆಂಗಳೂರಿಗೆ ಪಾದಯಾತ್ರೆ ಹೊರಟು, ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಬಸವರಾಜು ತಿಳಿಸಿದರು. 

‘ಇದು ಕಾರ್ಪೊರೇಟ್ ಕಂಪನಿಗಳು ಮತ್ತು ರೈತರ ನಡುವಿನ ಸಂಘರ್ಷ’ ಎಂದು ಅವರು ಹೇಳಿದರು. 

‘ಕುಡುತಿನಿಯಲ್ಲಿ ಎನ್‌ಎಂಡಿಸಿ ತನ್ನ ವಶದಲ್ಲಿಟ್ಟುಕೊಂಡಿರುವ 2,800 ಎಕರೆಗೂ ಅಧಿಕ ಭೂಮಿಯಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಬೇಕು. ಅದಕ್ಕಾಗಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಬಳಿಗೆ ನಿಯೋಗ ಕರೆದೊಯ್ಯಲಾಗುವುದು‘ ಎಂದು ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಬಾಬು ತಿಳಿಸಿದರು. 

ಕುಡುತಿನಿ ಸುತ್ತಮುತ್ತಲ 7 ಹಳ್ಳಿಗಳ ರೈತರು, ಹೋರಾಟಗಾರರು ಮತ್ತು ಕಾರ್ಮಿಕ ಸಂಘಟನೆಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.