ADVERTISEMENT

ಹರಪನಹಳ್ಳಿ: ಕೂಲಿ ಹಣ ಪಾವತಿಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 15:22 IST
Last Updated 15 ಡಿಸೆಂಬರ್ 2023, 15:22 IST
ಹರಪನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ಬಾಕಿ ಕೂಲಿ ಹಣ ಪಾವತಿಗೆ ಆಗ್ರಹಿಸಿ ಪ್ರಧಾನಮಂತ್ರಿಗೆ ಅಂಚೆಪತ್ರ ಬರೆದು ಶುಕ್ರವಾರ ಪ್ರದರ್ಶಿಸಿದರು
ಹರಪನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ಬಾಕಿ ಕೂಲಿ ಹಣ ಪಾವತಿಗೆ ಆಗ್ರಹಿಸಿ ಪ್ರಧಾನಮಂತ್ರಿಗೆ ಅಂಚೆಪತ್ರ ಬರೆದು ಶುಕ್ರವಾರ ಪ್ರದರ್ಶಿಸಿದರು   

ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ಮೂರು ತಿಂಗಳಿನಿಂದ ಬಾಕಿ ಉಳಿದಿರುವ ಕೂಲಿ ಹಣವನ್ನು ಪಾವತಿ ಮಾಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ವಿವಿಧ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರು ಶುಕ್ರವಾರ ಪತ್ರ ಚಳವಳಿ ನಡೆಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕನ್ನಡದಲ್ಲಿ ಅಂಚೆ ಪತ್ರ ಬರೆದಿರುವ ಕಾರ್ಮಿಕರು ಮೂರು ತಿಂಗಳ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ.

‘ತಾಲ್ಲೂಕು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆ. ರೈತರು ಬೆಳೆ ನಷ್ಟ ಅನುಭವಿಸಿ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ನೆರವು ನೀಡುವ ಭರವಸೆಯಿಂದ ಕೂಲಿ ಕೆಲಸ ಮಾಡಿದ್ದಾರೆ. ಆದರೆ 3 ತಿಂಗಳಾದರು ಕೂಲಿ ಹಣ ಪಾವತಿಯಾಗದ ಪರಿಣಾಮ ಕುಟುಂಬಗಳ ನಿರ್ವಹಣೆ ಕಷ್ಟವಾಗಿದೆ’ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ತಾಲ್ಲೂಕಿನ ತೊಗರಿಕಟ್ಟೆ, ಗೋವೆರಹಳ್ಳಿ, ಅಲರಮರಸಿಕೆರೆ, ಯಡಿಹಳ್ಳಿ, ಬಿಕ್ಕಿಕಟ್ಟಿ, ಕುಂಚೂರು, ಅರಸನಾಳು, ಕುಂಚೂರು, ನಿಟ್ಟೂರು, ತಾವರಗುಂದಿಯ ನೂರಾರು ಕಾರ್ಮಿಕರು 500ಕ್ಕೂ ಅಧಿಕ ಅಂಚೆಪತ್ರಗಳನ್ನು ಅಂಚೆಪೆಟ್ಟಿಗೆಗೆ ಹಾಕುವ ಮೂಲಕ ಬರಗಾಲ ಇರುವ ಕಾರಣ ಉದ್ಯೋಗ ಖಾತ್ರಿಯಲ್ಲಿ ಹೆಚ್ಚುವರಿ 50 ಮಾನವ ದಿನಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಮಿಕ ಮುಖಂಡರಾದ ಭಾಗ್ಯ, ಶೃತಿ, ರಮೇಶ, ಸುನಿತ, ನಾಗಮ್ಮ, ಗೀತಾ, ಕಾವ್ಯ, ಇಂದ್ರಮ್ಮ, ಮಂಗಳ, ಶೋಭಾ, ಈರಪ್ಪ ನೇತೃತ್ವವಹಿಸಿದ್ದರು.

ಹರಪನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ಬಾಕಿ ಕೂಲಿ ಹಣ ಪಾವತಿಗೆ ಆಗ್ರಹಿಸಿ ಪ್ರಧಾನಮಂತ್ರಿಗೆ ಅಂಚೆಪತ್ರ ಬರೆದು ಶುಕ್ರವಾರ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.