ADVERTISEMENT

‘ಗ್ರಂಥಾಲಯಗಳು ದೇವಾಲಯಗಳಿಗೆ ಸಮ’

ಮೂರು ದಿನಗಳ ಗ್ರಂಥಾಲಯ ಕೌಶಲ ಅಭಿವೃದ್ಧಿ ಶಿಬಿರ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 12:14 IST
Last Updated 4 ಜುಲೈ 2022, 12:14 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯವು ಸೋಮವಾರ ವಿ.ವಿ.ಯಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಗ್ರಂಥಾಲಯ ಕೌಶಲ ಅಭಿವೃದ್ಧಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯವು ಸೋಮವಾರ ವಿ.ವಿ.ಯಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಗ್ರಂಥಾಲಯ ಕೌಶಲ ಅಭಿವೃದ್ಧಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಗ್ರಂಥಾಲಯಗಳು ದೇವಾಲಯಗಳಿಗೆ ಸಮ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯವು ಸೋಮವಾರ ಏರ್ಪಡಿಸಿದ್ದ ಮೂರು ದಿನಗಳ ಗ್ರಂಥಾಲಯ ಕೌಶಲ ಅಭಿವೃದ್ಧಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಶೋಧನೆಯಲ್ಲಿ ಗ್ರಂಥಾಲಯಗಳಿಗೆ ಪ್ರಮುಖವಾದ ಸ್ಥಾನವಿದೆ. ಪುಸ್ತಕಗಳು ಓದುಗರ ಗೆಳಯರಾಗಿ ಅವರನ್ನು ಸದಾ ಜೀವಂತವಾಗಿಡುತ್ತವೆ. ಪುಸ್ತಕಗಳು ಹೊಸ-ಹೊಸ ಜ್ಞಾನವನ್ನು ಧಾರೆ ಎರೆಯುತ್ತವೆ. ಇಂತಹ ಜ್ಞಾನ ಭಂಡಾರವನ್ನು ಒಳಗೊಂಡಿರುವ ಗ್ರಂಥಾಲಯಗಳನ್ನು ಕಾಲಕ್ಕೆ ತಕ್ಕಂತೆ ಸಿದ್ದಗೊಳಿಸುವುದು ಮುಖ್ಯ ಎಂದರು.

ADVERTISEMENT

ಥಿಯೋಸಫಿಕಲ್ ಮಹಿಳಾ ಕಾಲೇಜಿನ ಗ್ರಂಥಪಾಲಕಿ ಸುಜಾತ ಡಿ.ಎನ್ ಉದ್ಘಾಟಿಸಿ, ಜಗತ್ತನ್ನು ಆಳುತ್ತಿರುವುದು ಜ್ಞಾನ. ಜ್ಞಾನದ ಕಣಜ ಗ್ರಂಥಾಲಯಗಳು. ಸಾಂಪ್ರದಾಯಿಕ ರೂಪದಲ್ಲಿದ್ದ ಗ್ರಂಥಾಲಯ ವ್ಯವಸ್ಥೆಯೂ ಇಂದು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಡಿಜಿಟಲ್ ರೂಪ ಪಡೆದುಕೊಂಡಿದೆ. ತಂತ್ರಜ್ಞಾನದ ಸಹಾಯದಿಂದ ನಾವಿರುವಲ್ಲಿಯೇ ಪುಸ್ತಕಗಳನ್ನು ಓದಬಹುದಾಗಿದೆ ಎಂದು ಹೇಳಿದರು.

ಪ್ರತಿಯೊಂದು ಪುಸ್ತಕಕ್ಕೂ ಒಬ್ಬ ಓದುಗ, ಪ್ರತಿಯೊಬ್ಬ ಓದುಗನಿಗೂ ಒಂದು ಪುಸ್ತಕ ಇರುವುದು. ಪ್ರಸ್ತುತ ಕಾಲಘಟ್ಟದಲ್ಲಿ ಸಂಶೋಧನಾರ್ಥಿಗಳಿಗೆ ಭೌತಿಕ ಗ್ರಂಥಾಲಯದ ನಿರ್ವಹಣೆಯ ಜೊತೆಗೆ ಆನ್‍ಲೈನ್ ಗ್ರಂಥಾಲಯಗಳ ಬಳಕೆಯ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಆನ್‍ಲೈನ್ ಮೂಲಕ ದೇಶ-ವಿದೇಶಗಳ ಗ್ರಂಥಾಲಯಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿರುವ ಸಂಶೋಧನಾ ಪ್ರಬಂಧಗಳನ್ನು ಸುಲಭವಾಗಿ ಪಡೆಯಬಹುದು ಎಂದು ತಿಳಿಸಿದರು.

ಲಲಿತಕಲೆಗಳ ನಿಕಾಯದ ಡೀನ್‌ ಕೆ.ರವೀಂದ್ರನಾಥ, ಯಾವುದೇ ಒಂದು ಸಂಶೋಧನೆಯು ಕೇಂದ್ರೀಯ ನೆಲೆ ಹಾಗೂ ಕ್ಷೇತ್ರೀಯ ನೆಲೆ ಎಂಬ ಎರಡು ನೆಲೆಗಳನ್ನು ಆಧರಿಸಿರುತ್ತದೆ. ಕೇಂದ್ರೀಯ ನೆಲೆಯು ಗ್ರಂಥಾಲಯವನ್ನು ಒಳಗೊಂಡಿರುವುದು. ಸಂಶೋಧಕರಿಗೆ ಅಗತ್ಯವಾದ ಆಕಾರ ಸಾಮಗ್ರಿಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಂಶೋಧನಾರ್ಥಿಯೂ ಗ್ರಂಥಾಲಯದ ಬಳಕೆ, ನಿರ್ವಹಣೆ ಮತ್ತು ಸಂರಕ್ಷಣೆ ಬಗ್ಗೆ ಕೌಶಲ ತಿಳಿಯಬೇಕು ಎಂದರು.

ಅಕ್ಷರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಕೆ.ಎಂ. ಮೇತ್ರಿ, ಅಧ್ಯಯನಾಂಗದ ನಿರ್ದೇಶಕ ಪಿ.ಮಹಾದೇವಯ್ಯ, ಸಮಾಜ-ವಿಜ್ಞಾನಗಳ ನಿಕಾಯದ ಡೀನ್‌ ಸಿ.ವಾಸುದೇವನ್, ಸಹಾಯಕ ಗ್ರಂಥಪಾಲಕ ಶಂಕರಗೌಡ ಎಸ್., ಉಪಗ್ರಂಥಪಾಲಕ ಎಂ.ಸಿ.ಗುಡಿಮನಿ, ತಾಂತ್ರಿಕ ಸಹಾಯಕ ಹರ್ಷವರ್ಧನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.