ADVERTISEMENT

ಹಂಪಿ ಕನ್ನಡ ವಿ.ವಿ.ಯಲ್ಲಿ ಗ್ರಂಥಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 12:13 IST
Last Updated 29 ಏಪ್ರಿಲ್ 2019, 12:13 IST
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಕುಲಪತಿ ಪ್ರೊ. ಸ.ಚಿ. ರಮೇಶ್‌ ಅವರು ವಿದ್ಯಾರ್ಥಿಗಳಿಗೆ ವಿತರಿಸಿದರು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಕುಲಪತಿ ಪ್ರೊ. ಸ.ಚಿ. ರಮೇಶ್‌ ಅವರು ವಿದ್ಯಾರ್ಥಿಗಳಿಗೆ ವಿತರಿಸಿದರು   

ಹೊಸಪೇಟೆ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿಶೇಷ ಘಟಕದ ಗ್ರಂಥಾಲಯವನ್ನು ಕುಲಪತಿ ಪ್ರೊ.ಸ.ಚಿ. ರಮೇಶ್‌ ಸೋಮವಾರ ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಚಾಲನೆ ಉದ್ಘಾಟಿಸಿದರು.

ಬಳಿಕ ಮಾತನಾಡಿ, ‘ಎಸ್ಸಿ/ಎಸ್ಟಿವಿಶೇಷ ಘಟಕದಲ್ಲಿ ಇಷ್ಟೊಂದು ವೈವಿಧ್ಯಮಯ ಪುಸ್ತಕಗಳು ಇರುವುದು ಅತ್ಯಂತ ಸಂತೋಷದ ಸಂಗತಿ. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಒದಗಿಸುವುದರಿಂದ ಬಹಳಷ್ಟು ಅನುಕೂಲಗಳು ಆಗುತ್ತವೆ’ ಎಂದರು.

‘ವಿಶೇಷ ಘಟಕದಿಂದ ಎರವಲು ಕಾರ್ಡಿನ ಮೂಲಕ ಒಬ್ಬ ವಿದ್ಯಾರ್ಥಿಗೆ ಎಂಟು ದಿನಗಳವರೆಗೆ ಒಂದು ಪುಸ್ತಕವನ್ನು ಪಡೆದು ಓದುವ ಅನುಕೂಲವನ್ನು ಕಲ್ಪಿಸಲಾಗಿದೆ. ಪುಸ್ತಕಗಳ ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳಬೇಕು. ಇಂದಿನ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೊಬೈಲ್‍ಗಳು ನಮ್ಮ ಹೆಚ್ಚಿನ ಸಮಯವನ್ನು ಹಾಳು ಮಾಡುತ್ತಿವೆ. ಅದರಿಂದ ವಿದ್ಯಾರ್ಥಿಗಳು ದೂರ ಉಳಿದು, ಓದಲು ಹೆಚ್ಚಿನ ಸಮಯ ಮೀಸಲಿಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಕನ್ನಡ ವಿಶ್ವವಿದ್ಯಾಲಯದ ಎಲ್ಲ ಪೀಠಗಳ ಸಮುಚ್ಚಯವನ್ನು ಮಾಡಿ ಅಲ್ಲಿ ಸುಸಜ್ಜಿತವಾದ ಗ್ರಂಥಾಲಯದ ವ್ಯವಸ್ಥೆ ಕಲ್ಪಿಸಿ, ಸದಾಕಾಲ ವಿದ್ಯಾರ್ಥಿಗಳಿಗೆ ಪುಸ್ತಕ ದೊರೆಯುವಂತೆ ಮಾಡಲಾಗುವುದು’ ಎಂದು ತಿಳಿಸಿದರು.

ಕುಲಸಚಿವ ಅಶೋಕಕುಮಾರ ರಂಜೇರೆ, ಉಪಕುಲಸಚಿವ ಎ. ವೆಂಕಟೇಶ, ಹಣಕಾಸು ಅಧಿಕಾರಿ ಸಿದ್ಧಗಂಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.