ADVERTISEMENT

31 ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌: ಬಳ್ಳಾರಿಯಲ್ಲಿ 11,512 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:59 IST
Last Updated 14 ಸೆಪ್ಟೆಂಬರ್ 2025, 5:59 IST
ರಾಷ್ಟ್ರೀಯ  ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ. ಶಾಂತಿ ಅವರು ಖುದ್ದಾಗಿ ಪ್ರಕರಣಗಳ ವಿಲೇವಾರಿ ಮಾಡುವಲ್ಲಿ ನಿರತರಾಗಿದ್ದರು
ರಾಷ್ಟ್ರೀಯ  ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ. ಶಾಂತಿ ಅವರು ಖುದ್ದಾಗಿ ಪ್ರಕರಣಗಳ ವಿಲೇವಾರಿ ಮಾಡುವಲ್ಲಿ ನಿರತರಾಗಿದ್ದರು   

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡು ಒಟ್ಟು 31 ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಸುಸೂತ್ರವಾಗಿ ನಡೆಯಿತು. ವಿವಿಧ ವ್ಯಾಜ್ಯಗಳ ಪ್ರಕರಣಗಳು ವಿಲೇವಾರಿಯಾದವು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರು ಖುದ್ದಾಗಿ ಪ್ರಕರಣಗಳ ವಿಲೇವಾರಿ ಮಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ಗಳನ್ನು ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಅವರು, ‘ಸಾರ್ವಜನಿಕರು– ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳುವುದು ಉತ್ತಮ ಜೀವನ ನಡೆಸಲು ಒಂದು ಸದಾವಕಾಶ’ ಎಂದು ತಿಳಿಸಿದರು.

ADVERTISEMENT

‘ತ್ವರಿತ ನ್ಯಾಯಕ್ಕಾಗಿ ಕಕ್ಷಿದಾರರು ಮುತುವರ್ಜಿ ವಹಿಸಬೇಕು. ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಭಾಗವಹಿಸಿದರೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು. ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಮಾನಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನ ನಡೆಯಲಿದೆ’ ಎಂದರು.

ಇದೇ ವೇಳೆ ವಿವಿಧ ಕಲಹಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಂಡ ಕುಟುಂಬಗಳನ್ನು ಮಾತನಾಡಿಸಿದ ಶಾಂತಿ, ಅವರಿಗೆ ಅಭಿನಂದಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್.ಹೊಸಮನೆ ಇದ್ದರು.

ಇತ್ಯರ್ಥವಾದ ಪ್ರಕರಣಗಳು 

ಅಖಂಡ ಬಳ್ಳಾರಿ ಜಿಲ್ಲೆಯ 31 ಪೀಠಗಳಲ್ಲಿ ಬಾಕಿ ಉಳಿದಿದ್ದ ಒಟ್ಟು 16,650 ಬಾಕಿ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಕ್ಕೆ (ವರ್ಚುವಲ್‌ ಮತ್ತು ಭೌತಿಕವಾಗಿ) ಕೈಗೆತ್ತಿಕೊಳ್ಳಲಾಯಿತು. ಅದರಲ್ಲಿ 11,512 ಪ್ರಕರಣಗಳು ಬಗೆಹರಿದಿದ್ದು ಒಟ್ಟು ₹24,19,55,071 ಮೊತ್ತದ ಪರಿಹಾರ ನೀಡಲಾಗಿದೆ. ವ್ಯಾಜ್ಯಪೂರ್ವದ ಒಟ್ಟು 4,68,566 ಪ್ರಕರಣಗಳನ್ನು ವಿಚಾರಣೆಗೆ ನಿಗದಿ ಮಾಡಲಾಗಿತ್ತು. ಈ ಪೈಕಿ 4,60,909 ಪ್ರಕರಣಗಳು ಬಗೆಹರಿದಿದ್ದು ₹1,93,79,69,679 ಮೊತ್ತದ ಪರಿಹಾರ ನೀಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.