
ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಶ್ರೀಧರ ಗಡ್ಡೆ ಗ್ರಾಮದ, ಇನಾಂ ಭೂಮಿಯ ಹಕ್ಕನ್ನು ಅಕ್ರಮವಾಗಿ ಬದಲಾವಣೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಉಪವಿಭಾಗಾಧಿಕಾರಿ (ಎಸಿ), ಇಬ್ಬರು ಸ್ವಾಮೀಜಿ ಮತ್ತು ಅಮಾನತುಗೊಂಡಿರುವ ತಹಶೀಲ್ದಾರ್ ವಿರುದ್ಧ ಲೋಕಾಯುಕ್ತ ಬಳ್ಳಾರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಳ್ಳಾರಿಯ ಎ.ಸಿ ಆಗಿ ಕಾರ್ಯನಿರ್ವಹಿಸುತ್ತಿರುವ ಪಿ. ಪ್ರಮೋದ್, ಬಳ್ಳಾರಿಯಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ, ಸದ್ಯ ಅಮಾನತಿನಲ್ಲಿರುವ ಎಚ್.ವಿಶ್ವನಾಥ್, ಬಳ್ಳಾರಿಯ ಕೊಟ್ಟೂರು ಸ್ವಾಮಿ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿಗೆ ಸದ್ಯ ತನಿಖೆ ಭೀತಿ ಎದುರಾಗಿದೆ. ಮಠದ ಈ ಹಿಂದಿನ ಪೀಠಾಧ್ಯಕ್ಷರಾಗಿದ್ದ ದಿವಂಗತ ಸಂಗನಬಸವಸ್ವಾಮೀಜಿ ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ.
ಪ್ರಮೋದ್ 2016ರಲ್ಲಿ ಬಳ್ಳಾರಿಯ ತಹಶೀಲ್ದಾರ್ ಆಗಿದ್ದರು. ಆಗ ಶ್ರೀಧರಗಡ್ಡೆ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ 78 ಎಕರೆ 78 ಸೆಂಟ್ ಇನಾಂ ಭೂಮಿಯನ್ನು ಮತ್ತು ಅದೇ ಗ್ರಾಮದಲ್ಲಿ ಕೊಟ್ಟೂರು ಸ್ವಾಮಿ ಮಠದ ಹೆಸರಲ್ಲಿದ್ದ 1.61 ಎಕರೆ ಭೂಮಿಯನ್ನು ಅಪರಾಧಿಕ ಒಳಸಂಚು ನಡೆಸಿ, ಕೊಟ್ಟೂರು ಸ್ವಾಮಿ ಮಠದ ಸಂಗನಬಸವಸ್ವಾಮೀಜಿ ಅವರಿಗೆ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ಭೂಮಿ ಬಳ್ಳಾರಿಯ ‘ವಿರಕ್ತ ಮಠದ ನೌಕರ ನಿಯಮಿತ’ ಎಂಬ ಸಂಸ್ಥೆಯ ಅನುಭೋಗದಲ್ಲಿದ್ದತ್ತು. 1978ರಲ್ಲಿ ರಾಜ್ಯದಲ್ಲಿ ‘ಕೆಲವು ಇನಾಂಗಳ ರದ್ದತಿ ಕಾಯ್ದೆ–1977’ ಜಾರಿಯಾಗಿದ್ದು, ಅದರ ಪ್ರಕಾರ ಈ ನಿರ್ದಿಷ್ಟ ಜಮೀನು ಸರ್ಕಾರಕ್ಕೆ ವಾಪಸಾಗಬೇಕಿತ್ತು. ಅಥವಾ, ಆ ಸಂಸ್ಥೆಯ ಮುಖ್ಯಸ್ಥರು ಕರ್ನಾಟಕ ಭೂಸುಧಾರಣಾ ಕಾಯ್ದೆ ಅಡಿಯಲ್ಲಿ ಭೂ ನ್ಯಾಯಮಂಡಳಿ ಮುಂದೆ ಹಿಡುವಳಿ ಅರ್ಜಿ ಸಲ್ಲಿಸಿ, ಹಕ್ಕು ಪಡೆಯಬೇಕಾಗಿತ್ತು. ಆದರೆ ಈ ಪ್ರಕ್ರಿಯೆ ಕೈಗೊಂಡ ಬಗ್ಗೆ ದಾಖಲೆಗಳೇ ಇಲ್ಲ ಎನ್ನಲಾಗಿದೆ.
ಹಕ್ಕು ಬದಲಾವಣೆಯಾದ ಭೂಮಿಯ ಇಂದಿನ ಮಾರುಕಟ್ಟೆ ಮೌಲ್ಯ ₹40 ಕೋಟಿ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ವಾಸ್ತವ ಮೌಲ್ಯ ಇನ್ನೂ ಅಧಿಕ ಎನ್ನಲಾಗಿದೆ.
ಭೂಮಿ ಮಾರಾಟ: ಹೀಗೆ ಹಕ್ಕು ಬದಲಾವಣೆಯಾದ ಭೂಮಿಯ ಸರ್ವೆ ಸಂಖ್ಯೆ 40/ಸಿರಲ್ಲಿದ್ದ 24.10 ಎಕರೆ ಭೂಮಿಯನ್ನು 2022ರಲ್ಲಿ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರು ಕೊಟ್ಟೂರು ಸ್ವಾಮಿ ಮಠದ ಸಂಗನಬಸವಸ್ವಾಮೀಜಿ ಅವರ ವಿಲ್ ಆಧರಿಸಿ, ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿಗೆ ಮತ್ತೆ ಹಕ್ಕು ಬದಲಾವಣೆ ಮಾಡಿದ್ದರು. ಇದರಲ್ಲೂ ಅಪರಾಧಿಕ ಒಳಸಂಚುಗಳು ನಡೆದಿವೆ ಎಂದು ಆರೋಪಿಸಲಾಗಿದೆ.
ಅಂತಿಮವಾಗಿ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ 24.10 ಎಕರೆ ಭೂಮಿಯನ್ನು ಶ್ರೇಯಸ್ ಗಾಂಧಿ ಮತ್ತು ಪಿ. ರಾಧಿಕಾ ಎಂಬುವವರಿಗೆ ಒಟ್ಟು ₹84,35,000ಕ್ಕೆ ಮಾರಾಟ ಮಾಡಿದ್ದರು.
ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಅಂದಿನ ಲೋಕಾಯುಕ್ತ ಎಸ್‌ಪಿ ಸಿದ್ದರಾಜು, ತನಿಖೆಗೆ ಅನುಮತಿ ನೀಡುವಂತೆ ವರ್ಷದ ಹಿಂದೆ ಲೋಕಾಯುಕ್ತ ಎಡಿಜಿಪಿ ಮೂಲಕ ಸರ್ಕಾರಕ್ಕೆ ಅನುಮತಿ ಕೋರಿದ್ದರು. ಅದರಂತೆ ಎ.ಸಿ ಪ್ರಮೋದ್ ಮತ್ತು ಅಮಾನಿತ ತಹಶೀಲ್ದಾರ್ ವಿಶ್ವನಾಥ್ ವಿರುದ್ಧ ತನಿಖೆಗೆ ಸರ್ಕಾರವೂ ಕೆಲವು ತಿಂಗಳ ಹಿಂದೆ ಆದೇಶ ಹೊರಡಿಸಲಾಗಿತ್ತು. ಇದನ್ನು ಆದರಿಸಿ ನ. 13ರಂದು ಬಳ್ಳಾರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ದಾಖಲಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಪ್ರಕರಣದ ವಿವರ ಪರಿಶೀಲಿಸಿ ನಾನು ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸುತ್ತೇನೆ.ಪ್ರಮೋದ್ ಬಳ್ಳಾರಿ ಉಪ ವಿಭಾಗಾಧಿಕಾರಿ
ಎಫ್‌ಐಆರ್ ದಾಖಲಾಗಿದೆ. ವಾರೆಂಟ್ ಜಾರಿ ಮಾಡಿ ಮುಂದಿನ ತನಿಖೆ ನಡೆಸುತ್ತೇವೆ. ತನಿಖೆಯಲ್ಲಿ ಅವರ ಮೇಲಿನ ಆರೋಪ ಸಾಭೀತಾದರೆ ಬಂಧನ ಪ್ರಕ್ರಿಯೆ ನಡೆಯಲಿದೆ.– ಪವನ್ ಎಚ್ಚೂರು ಲೋಕಾಯುಕ್ತ ಎಸ್‌ಪಿ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.