ADVERTISEMENT

ಬಳ್ಳಾರಿ| ಜಿಲ್ಲೆಯಲ್ಲಿ ಅನುರಣಿಸಿದ ಶಿವನಾಮ ಸ್ಮರಣೆ

ದೇವಾಲಯಗಳಲ್ಲಿ ಮಾಸ್ಕ್‌ ಮರೆತ ಭಕ್ತರು, ಪರಸ್ಪರ ಅಂತರ ಮಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 8:27 IST
Last Updated 11 ಮಾರ್ಚ್ 2021, 8:27 IST
ಬಳ್ಳಾರಿಯ ಕೋಟೆ ಮಲ್ಲೇಶ್ವರ ಗುಡಿಯಲ್ಲಿ ಹೂವಿನ ಅಲಂಕಾರದಿಂದ ಕೂಡಿದ ಪೂಜೆ
ಬಳ್ಳಾರಿಯ ಕೋಟೆ ಮಲ್ಲೇಶ್ವರ ಗುಡಿಯಲ್ಲಿ ಹೂವಿನ ಅಲಂಕಾರದಿಂದ ಕೂಡಿದ ಪೂಜೆ   

ಬಳ್ಳಾರಿ: ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲೆಯ ನೂರಾರು ಶಿವ ದೇವಾಲಯಗಳಲ್ಲಿ ಗುರುವಾರ ಶಿವನಾಮ ಸ್ಮರಣೆ ಅನುರಣಿಸಿತು. ಓಂ ನಮಃ ಶಿವಾಯ ಮಂತ್ರ ಭಕ್ತರ ಉಸಿರಾಟದಲ್ಲಿ ಲೀನವಾಗಿತ್ತು.

ಗುಡಿಗಳಲ್ಲಿ ಸಾವಿರಾರು ಭಕ್ತರು ಬಿಲ್ವಪತ್ರೆ ಅರ್ಚನೆ, ಕುಂಕುಮಾರ್ಚನೆ, ಭಜನೆಯನ್ನು ನಿರಂತರವಾಗಿ ನಡೆಸಿದರು. ವಿಶೇಷ ಪೂಜೆಗಳು ನಡೆದವು. ಧ್ಯಾನ, ಕೀರ್ತನೆ, ಅಖಂಡ ಭಜನೆ, ಲಿಂಗಗಳ ಮೆರವಣಿಗೆ, ಉಪನ್ಯಾಸ, ಜಾಗರಣೆ, ಮನರಂಜನೆ ಕಾರ್ಯಕ್ರಮಗಳಲ್ಲಿ ಭಕ್ತರು ಮಿಂದರು. ಹಬ್ಬದ ಜಾಗರಣೆಗೆಂದೇ ಮನೆಗಳಲ್ಲಿ ಮತ್ತು ಗುಡಿಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೂ ಏರ್ಪಾಡಾಗಿದ್ದವು.

ಬೆಳಗಿನ ಜಾವದಿಂದಲೇ ಉಪವಾಸ ವ್ರತವನ್ನು ಆರಂಭಿಸಿದ ನೂರಾರು ಭಕ್ತರು ಮಡಿಸ್ನಾನ ಮಾಡಿಕೊಂಡು ಮನೆಗಳ ಸಮೀಪದಲ್ಲಿರುವ ಈಶ್ವರ ಗುಡಿಗಳಿಗೆ ತೆರಳಿ ಪೂಜೆ, ಭಕ್ತಿ ಸಮರ್ಪಿಸಿದರು.

ADVERTISEMENT

ನಗರದ ಪಾರ್ವತಿನಗರದಲ್ಲಿರುವ ಈಶ್ವರ ಗುಡಿ, ಅನಾದಿಲಿಂಗೇಶ್ವರ ಗುಡಿ, ಕಪ್ಪಗಲ್ಲು ರಸ್ತೆಯ ವೀರಬ್ರಹ್ಮಯ್ಯಸ್ವಾಮಿ ಗುಡಿ, ಕಾಳಮ್ಮಬೀದಿ ಮತ್ತು ಬೆಂಗಳೂರು ರಸ್ತೆಯಲ್ಲಿರುವ ನಗರೇಶ್ವರ ಗುಡಿ, ಸತ್ಯನಾರಾಯಣಪೇಟೆಯ ಕಾಶಿವಿಶ್ವೇಶ್ವರ ಸ್ವಾಮಿ, ಕೋಟೆ ಪ್ರದೇಶದ ಮಲ್ಲೇಶ್ವರ ಗುಡಿ, ದೊಡ್ಡಮಾರುಕಟ್ಟೆ ಪ್ರದೇಶದಲ್ಲಿರುವ ನೀಲಕಂಠೇಶ್ವರ ಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಬಸವೇಶ್ವರನಗರದಲ್ಲಿರುವ ಸಂಗಮೇಶ್ವರ ಗುಡಿ, ಗಡಂಗ್‌ ಬೀದಿಯಲ್ಲಿರುವ ನೀಲಕಂಠೇಶ್ವರ ಗುಡಿ, ಶಿವಲೀಲಾ ನಗರದ ಶಿವಲಿಂಗೇಶ್ವರ ಗುಡಿಯಲ್ಲಿ ವಿಶೇಷ ಪೂಜೆ, ಅರ್ಚನೆ, ಭಜನೆಗಳು ನಡೆದವು.

ಹಬ್ಬದ ಪ್ರಯುಕ್ತ ಭಕ್ತರು ಅಕ್ಕಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸದೇ, ಮಂಡಕ್ಕಿ,ಅವಲಕ್ಕಿ ವಗ್ಗರಣೆ, ಹಣ್ಣು, ಹಾಲು, ಖರ್ಜೂರ, ಒಣದ್ರಾಕ್ಷಿಯನ್ನಷ್ಟೇ ಸೇವಿಸಿ ಉಪವಾಸ ಆಚರಿಸಿ ಧನ್ಯತೆ ಅನುಭವಿಸಿದರು.

ಜಾತ್ರೆಯ ಸಂಭ್ರಮ

ಹಲವು ದೇವಸ್ಥಾನಗಳ ಆವರಣದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಮಕ್ಕಳ ಅಟಿಕೆ ಸಾಮಗ್ರಿಗಳನ್ನು ಮಾರುವವರು, ಪೂಜಾಸಾಮಗ್ರಿ ಮಾರಾಟ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ಉಚಿತ ಬಿಲ್ವಪತ್ರೆ ವಿತರಣೆ

ಡಾ.ಪಂಡಿತ ಪುಟ್ಟರಾಜ ಕವಿಗವಾಯಿಗಳ ಸೇವಾ ಸಂಘ ಹಾಗೂ ಆರಾಧ್ಯ ರಂಗಬಳಗದ ಸದಸ್ಯರು ಎಂದಿನಂತೆ ಈ ವರ್ಷವೂ ನಗರದ ಕನಕದುರ್ಗಮ್ಮ ಗುಡಿ ಆವರಣದಲ್ಲಿ ಭಕ್ತರಿಗೆ ಉಚಿತವಾಗಿ ಬಿಲ್ವಪತ್ರೆ ವಿತರಿಸಿದರು. ಪಂಚಾಮೃತ ಅಭಿಷೇಕವನ್ನೂ ನೀಡಿ ಹಬ್ಬದ ಶುಭಾಷಯಗಳನ್ನು ಹೇಳಿದರು. ಶಾಸಕ ಜಿ.ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.

ಮುಖಂಡರಾದ ಎಂ,ಬಸವರಾಜಸ್ವಾಮಿ, ಮೃತ್ಯುಂಜಯಸ್ವಾಮಿ, ಗೌರಿಶಂಕರ ಸ್ವಾಮಿ, ಅಮರೇಶ ಹಚ್ಚೊಳ್ಳಿ, ತಿಪ್ಪೇಸ್ವಾಮಿ, ರವಿಗೌಡ, ರುದ್ರಮುನಿಸ್ವಾಮಿ, ಯುವರಾಜಗೌಡ ಭಾಗವಹಿಸಿದ್ದರು.

ಕೊರೊನಾ: ಅಂತರ ಮಾಯ!

ಶಿವ ದೇವಸ್ಥಾನಗಳಲ್ಲಿ ನೂಕುನುಗ್ಗಲು ಏರ್ಪಟ್ಟು ಭಕ್ತರು ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತು ದರ್ಶನದ ಕಡೆಗೆ ಗಮನ ಹರಿಸಿದ್ದರು. ಭಕ್ತರಲ್ಲಿ ಹಲವರು ಮಾಸ್ಕ್‌ ಧರಿಸಿದ್ದರೆ, ಅವರ ನಡುವೆ ಮಾಸ್ಕ್‌ ಧರಿಸದೇ ಇರುವವರು ಕೂಡ ಸೇರಿಕೊಂಡಿದ್ದರು.

ನಗರದ ದೊಡ್ಡಮಾರುಕಟ್ಟೆಯಲ್ಲಿ ಕರ್ನಾಟಕ ಯುವಶಕ್ತಿ ಸಂಘಟನೆಯು ಮನರಂಜನೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.