ADVERTISEMENT

ಮಲಯಾಳಂ ಗೀತರಚನೆಕಾರ ಅನ್ವರ್‌ ಅಲಿ ಅವರ 'ರೇಪ್‌' ಕವಿತೆ ಸೃಷ್ಟಿಸಿದ ನೀರವ ಮೌನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 11:26 IST
Last Updated 21 ಅಕ್ಟೋಬರ್ 2022, 11:26 IST
ಬಳ್ಳಾರಿಯಲ್ಲಿ ನಡೆಯುತ್ತಿರುವ ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಮಲಯಾಳಂ ಕವಿ, ಗೀತರಚನೆಕಾರ ಅನ್ವರ್‌ ಅಲಿ ತಮ್ಮ ಕವಿತೆಯನ್ನು ಪ್ರಸ್ತುತ ಪಡಿಸಿದರು.
ಬಳ್ಳಾರಿಯಲ್ಲಿ ನಡೆಯುತ್ತಿರುವ ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಮಲಯಾಳಂ ಕವಿ, ಗೀತರಚನೆಕಾರ ಅನ್ವರ್‌ ಅಲಿ ತಮ್ಮ ಕವಿತೆಯನ್ನು ಪ್ರಸ್ತುತ ಪಡಿಸಿದರು.   

ಬಳ್ಳಾರಿ: ಮಲಯಾಳಂನ ಗೀತರಚನೆಕಾರ ಅನ್ವರ್‌ ಅಲಿ ಅವರು ತಮ್ಮ ರೇಪ್‌ ಕವಿತೆಯನ್ನು ಭಾವದುಂಬಿ ವಾಚಿಸಿದಾಗ ಜನರಲ್ಲಿ ನೀರವ ಮೌನ. ಒಂದರೆ ಕ್ಷಣದ ನಂತರ ಎಚ್ಚೆತ್ತವರಂತೆ ಕರತಾಡನ.

‘ನೋವು ನಮ್ಮ ಮಗಳಾಗಿ ಹುಟ್ಟಿದರೆ ಏನೆಂದು ಹೆಸರಿಡುವೆ? ರೇಪ್‌ ಎಂದು ಹೆಸರಿಡುವೆ. ರೇಪ್‌ ಎಂದೇ ಕರೆಯುವೆ ಎಂದು ಆರಂಭವಾಗುವ ಈ ಕವಿತೆ ಈ ಕಾಲದ ತಲ್ಲಣ ಸಭಾಂಗಣದಲ್ಲಿ ಹರಡುವಂತೆ ಮಾಡಿತು.

'ಗುರುತಿನ ಚೀಟಿ' ಕವಿತೆಯು ನಮ್ಮ ದೇಶದ ಮುಸ್ಲಿಂ ಒಬ್ಬರ ಅಸಹಾಯಕತೆ, ಆಕ್ರೋಶ ಎರಡನ್ನೂ ಒಟ್ಟೊಟ್ಟಿಗೆ ಹೊರಹಾಕಿತು. ‘ಬರೆದಿಟ್ಟಿಕೊ ನನ್ನ ಹೆಸರು ಅಲಿ, ಆಧಾರ್‌ ಕಾರ್ಡಿಲ್ಲ ನನಗೆ, ಮಕ್ಕಳ ಧಾರಾಳ, ಎಲ್ಲ ಮಕ್ಕಳೂ ವಿಶ್ವವಿದ್ಯಾಲಯದಲ್ಲಿದ್ದಾರೆ, ಇಲ್ಲವೇ ಜೈಲಿನಲ್ಲಿದ್ದಾರೆ ಎಂದು ಆರಂಭವಾಗುವ ಕವಿತೆ.. ಗುರುತು ಕಾರ್ಡಿಲ್ಲ ನನಗೆ ಎನ್ನುತ್ತಲೇ ತನ್ನೊಳಗಿನ ಆಕ್ರೋಶಗಳಿಗೆ ಶಬ್ದಗಳನ್ನು ಒದಗಿಸುತ್ತದೆ.

ADVERTISEMENT

ಇಡೀ ಗೋಷ್ಠಿಗೆ ಅಸಹಾಯಕತನ ಮತ್ತು ವ್ಯವಸ್ಥೆಯ ವಿರುದ್ಧದ ಅಸಮಾಧಾನವನ್ನು ಹೊರಹಾಕುವಂಥ ಕವನಕ್ಕೆ ನಾಂದಿ ಹಾಡಿದ್ದು, ಇಸ್ರೇಲ್‌ನ ದಿತಿ ರೊನೆನ್‌ ಅವರು. ಅವರು ತಮ್ಮ ಮನೆಯೊಳಗೆ ಅಥವಾ ಕಣ್ಣಾಮುಚ್ಚಾಲೆ ಕವಿತೆಯಲ್ಲಿ, ಆಕಾಶವನ್ನು ಸೂರಾಗಿ ಎಳೆದುಕೊಳ್ಳಬಲ್ಲೆ ನನ್ನ ಮೇಲೆ, ಪಾದಗಳಿಗೇನು ಮಾಡಲಿ ಎಂಬ ಪ್ರಶ್ನೆಯೊಂದಿಗೆ ಧರೆ ಹೊತ್ತಿ ಉರಿದೊಡೆ ಭಾವವನ್ನು ಉಳಿಸಿದರು. ಅವರ ಇನ್ನೊಂದು ಕವಿತೆ ಒಂದು ಸ್ತನ, ಮೌನವನ್ನೇ ಸೃಷ್ಟಿಸಿತು.

ಮೈಸೂರಿನ ಮಧುರಾಣಿ ಎಚ್‌ಎಸ್‌ ಅವರು ಇರಲಿಬಿಡಿ ಇರಲಿಬಿಡಿ ನನ್ನ ಟೇಬಲ್ಲ ಹಾಗೆಯೇ, ಮತ್ತು ವಜ್ರವಾಗುವ ಬಗೆ ಕಾವ್ಯದಲ್ಲಿ ಗಟ್ಟಿ ರೂಪಕಗಳನ್ನು ಸೃಷ್ಟಿಸಿದವು. ಕಾವ್ಯಾಸಕ್ತರುಮೆಚ್ಚುಗೆ ಸೂಸಿ, ಚಪ್ಪಾಳೆ ತಟ್ಟುವುದು, ವಾಹ್‌ ವಾಹ್‌ ಹೇಳುವುದು ಸಾಗಿತ್ತು.

ಮಧುರಾಣಿ ಅವರ ಭಾವದುಂಬಿದ ಜೇನುಧ್ವನಿಯ ವಾಚನ, ಎಲ್ಲರ ಗಮನಸೆಳೆಯಿತು. ಅನ್ವರ್‌ ಅಲಿಯವರ ಕಂಚಿನ ಕಂಠದ ಓದು, ದಿತಿ ರೊನೆನ್‌ ಅವರ ಮೆಲುಧ್ವನಿಯ ವಾಚನ ಕಾವ್ಯ ಕೇಳ್ವಿಕೆಗೆ ಒಂದು ವೇದಿಕೆ ಸೃಷ್ಟಿಸಿತು. ತಾರಕೇಶ್ವರ್‌ ಅವರು ಗೋಷ್ಠಿಗೆ ನುಡಿಸ್ಪಂದನೆ ಸಲ್ಲಿಸುತ್ತ, ವಿಶ್ವ ಕಾವ್ಯವವನ್ನು ಕನ್ನಡಿಗರಿಗೆ ಉಣಬಡಿಸುತ್ತಿರುವುದು, ಕನ್ನಡ ಸಾಹಿತ್ಯವನ್ನು ವಿಶ್ವದತ್ತ ಸಾಹಿಹೋಗುವಂತೆ ಮಾಡಿದ ಈ ಸಮ್ಮೇಳನ ಸಾರ್ಥಕ್ಯ ಕಂಡಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.