ADVERTISEMENT

‘ಒಳಚರಂಡಿ ಸ್ವಚ್ಛತೆಗೆ ಮನುಷ್ಯರಬಳಸಿಕೊಂಡರೆ ಕಾನೂನು ಕ್ರಮ’

ಗಮನ ಸೆಳೆದ ಜನಜಾಗೃತಿ ಬೀದಿ ನಾಟಕ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 9:17 IST
Last Updated 19 ಏಪ್ರಿಲ್ 2021, 9:17 IST
ಮ್ಯಾನುವಲ್‌ ಸ್ಕ್ಯಾವೆಂಜರ್ಸ್‌ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ–2013 ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಸಮಾನತೆ ಟ್ರಸ್ಟ್‌ ಕಲಾವಿದರು ಸೋಮವಾರ ಹೊಸಪೇಟೆಯಲ್ಲಿ ಪ್ರಸ್ತುತಪಡಿಸಿದರು
ಮ್ಯಾನುವಲ್‌ ಸ್ಕ್ಯಾವೆಂಜರ್ಸ್‌ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ–2013 ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಸಮಾನತೆ ಟ್ರಸ್ಟ್‌ ಕಲಾವಿದರು ಸೋಮವಾರ ಹೊಸಪೇಟೆಯಲ್ಲಿ ಪ್ರಸ್ತುತಪಡಿಸಿದರು   

ಹೊಸಪೇಟೆ(ವಿಜಯನಗರ): ಮ್ಯಾನುವಲ್‌ ಸ್ಕ್ಯಾವೆಂಜರ್ಸ್‌ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ–2013 ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಅಭಿಯಾನ ಸೋಮವಾರ ಇಲ್ಲಿನ ನಗರಸಭೆ ಆವರಣದಲ್ಲಿ ನಡೆಯಿತು.

ಸಮಾನತೆ ಟ್ರಸ್ಟ್ ಕಲಾವಿದರು, ಸಫಾಯಿ ಕರ್ಮಚಾರಿಗಳು ಒಳಚರಂಡಿ ಪಿಟ್ ಗಳಲ್ಲಿ ಇಳಿದು ತ್ಯಾಜ್ಯ ಎತ್ತುವುದರಿಂದ ಆಗುವ ಪ್ರಾಣಾಪಾಯ ಕುರಿತು ರೂಪಕ ಪ್ರದರ್ಶಿಸಿದರು.

ಪ್ರದರ್ಶನದ ನಂತರ ಮಾತನಾಡಿದ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ‘ಮನುಷ್ಯರು ಪಿಟ್ ಒಳಗೆ ಇಳಿದು ಸ್ವಚ್ಚಗೊಳಿಸುವುದು ಅಮಾನುಷ ಪದ್ಧತಿಯಾಗಿದೆ. ಸಫಾಯಿ ಕರ್ಮಚಾರಿಗಳಿಗೆ ಪ್ರಾಣಾಪಾಯ ಉಂಟಾಗುವ ಉದ್ದೇಶದಿಂದಲೇ ಮ್ಯಾನುವಲ್ ಸ್ಕ್ಯಾವೆಂಜರ್ಸ್ ಪದ್ಧತಿ ನಿಷೇಧಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ನಗರವನ್ನು ಸ್ವಚ್ಚಗೊಳಿಸುವ ಎಲ್ಲಾ ಪೌರಕಾರ್ಮಿಕರು ಸಫಾಯಿ ಕರ್ಮಚಾರಿಗಳೇ ಆಗಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ 2013-14ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಶಿಕ್ಷೆಗೆ ಹೆದರಿ ಅನೇಕರು ಮಾಹಿತಿ ನೀಡಿರಲಿಲ್ಲ. ಈ ವರ್ಷ ಮತ್ತೊಮ್ಮೆ ಸಮೀಕ್ಷೆ ಆರಂಭವಾಗಿದೆ. ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಎಲ್ಲರೂ ಮಾಹಿತಿ ಕೊಟ್ಟು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಮ್ಯಾನುವಲ್ ಸ್ಕ್ಯಾವೆಂಜರ್ನಿಂದ ಹೇಗೆಲ್ಲ ತೊಂದರೆಗೆ ಒಳಪಡುತ್ತಾರೆ ಎಂಬುದನ್ನು ನಾಟಕದ ಮೂಲಕ ನೈಜವಾಗಿ ಕಲಾವಿದರು ಕಟ್ಟಿಕೊಟ್ಟಿದ್ದಾರೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಗುವುದು. ಒಳಚರಂಡಿ ಸ್ವಚ್ಛತೆಗೆ ಯಾರಾದರೂ ಮನುಷ್ಯರನ್ನು ಬಳಸಿಕೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸಫಾಯಿ ಕರ್ಮಚಾರಿಗಳು ನಗರಸಭೆಯಲ್ಲಿ ಹೆಸರು ನೋಂದಾಯಿಸಿಕೊಂಡು ಪುನರ್ವಸತಿ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಸಹಾಯಕ ಪರಿಸರ ಎಂಜಿನಿಯರ್ ಆರತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌, ಸಮಾನತೆ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಎನ್.ಹುಲಿಗೆಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.